ಮೈಸೂರು: ಶಾಸಕ ಗೋವಿಂದ ಕಾರಜೋಳ ವಿರುದ್ಧ ವಿಕಲಚೇತನರ ಪ್ರತಿಭಟನೆ

ಮೈಸೂರು,ಜು.14: ಮುಧೋಳ ವಿಧಾನಸಭಾ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ವಿರುದ್ಧ ವಿಕಲ ಚೇತನ ಅಭ್ಯದಯ ವೇದಿಕೆ, ಜನಸಂಗ್ರಾಮ ಪರಿಷತ್ ಹಾಗೂ ಅಂಗವಿಕಲರ ಒಕ್ಕೂಟ ದ ವತಿಯಿಂದ ಪ್ರತಿಭಟನೆ ನೆಡಯಿತು.
ನಗರದ ನ್ಯಾಯಾಲಯದ ಮುಂಬಾಗವಿರುವ ಗಾಂಧಿ ಪ್ರತಿಮೆ ಬಳಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು, ಗೋವಿಂದ ಕಾರಜೋಳ ಅವರು ಸದನದಲ್ಲಿ ಸರ್ಕಾರವನ್ನು ಟೀಕಿಸುವ ಬರದಲ್ಲಿ ಸಮ್ಮಿಶ್ರ ಸರಕಾರ ಕುರಿತು ಕುಂಟ, ಕುರುಡರಿದ್ದಂತೆ, ಕುಂಟನ ಮೇಲೆ ಕುರುಡನ ಸವಾರಿ ಎಂದು ವಿಕಲಚೇತರನ್ನು ಅಮಾನಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವನ್ನು ಟೀಕಿಸುವ ಹಕ್ಕು ಅವರಿಗಿದೆ. ಆದರೆ ಯಾವುದೇ ಒಂದು ವರ್ಗಕ್ಕೆ ಅಪಮಾನ ಮಾಡುವ ರೀತಿ ಟೀಕಿಸುವ ನೈತಿಕತೆ ಅವರಿಗಿಲ್ಲ, ಅಂಗವಿಕಲ ಅಧಿನಿಯಮ ಕಾಯ್ದೆಯನ್ನು ರಕ್ಷಿಸಿ ಸಮಾನ ಮಸ್ಥಿತಿಯಿಂದ ಎಲ್ಲರನ್ನೂ ಗೌರವಿಸಬೇಕಾಗಿದ್ದ ಶಾಸಕರ ಈ ರೀತಿಯ ಹೇಳಿಕೆಗಳು ಮಾನಸಿಕವಾಗಿ ಹಿಂಸೆ ನೀಡಿವೆ. 2016ರ ವಿಕಲಚೇತನರ ಕಾಯ್ದೆ ಸಮಾನ ಹಕ್ಕುಗಳ ಸಂರಕ್ಷಣೆ ಹಾಗೂ ಭಾಗವಹಿಸುವಕೆ ಉಲ್ಲಂಘನೆಯಾಗಿದ್ದು, ವಿಶೇಷ ಚೇತನರ ಹಕ್ಕುಗಳ ಉಳಿವಿಗಾಗಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಸನ್ನ, ಮಲ್ಲೇಗೌಡ, ಗೋಪಾಲಕೃಷ್ಣ, ಪ್ರಭುಸ್ವಾಮಿ ಎಂ. ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







