ಮಲೆನಾಡಿನಲ್ಲಿ ತಗ್ಗದ ಮುಂಗಾರು ಮಳೆಯ ಅಬ್ಬರ: ಹಲವೆಡೆ ಪ್ರವಾಹ
ಶಿವಮೊಗ್ಗ, ಜು. 14: ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆಯ ಆರ್ಭಟ ಕಡಿಮೆಯಾಯಿತು ಎನ್ನುತ್ತಿದ್ದಂತೆ, ಮತ್ತೆ ಜಿಲ್ಲೆಯಾದ್ಯಂತ ಧಾರಾಕಾರ ವರ್ಷಧಾರೆಯಾಗುತ್ತಿದೆ. ಕಳೆದ ರಾತ್ರಿಯಿಂದ ಹಲವೆಡೆ ಭಾರೀ ಮಳೆಯಾಗಲಾರಂಭಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿ ಭೀತಿ ಎದುರಾಗಿದೆ.
ಧಾರಾಕಾರ ಮಳೆಯಿಂದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಹಲವೆಡೆ ಮನೆಗಳ ಗೋಡೆಗಳು, ಗುಡ್ಡಗಳು ಕುಸಿದು ಬೀಳುತ್ತಿವೆ. ಮತ್ತೊಂದೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ತುಂಗಾ, ವರದಾ, ಮಾಲತಿ ನದಿಗಳು ಹಲವೆಡೆ ಪ್ರವಾಹ ಸೃಷ್ಟಿಸಿವೆ. ಅದರಲ್ಲಿಯೂ ವರದಾ ನದಿಯ ಪ್ರವಾಹದಿಂದ ಸಾಗರ, ಸೊರಬ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ತುಂಗಾ ನದಿಯ ಪ್ರವಾಹ ಸ್ಥಿತಿ ಮುಂದುವರಿದಿದೆ. ತುಂಗಾ ಡ್ಯಾಂನಿಂದ 50 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತೀರ್ಥಹಳ್ಳಿ ತಾಲೂಕಿನ ಹಲವೆಡೆ ತುಂಗಾ ಹಾಗೂ ಮಾಲತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ತಗ್ಗು ಪ್ರದೇಶಗಳ ನಿವಾಸಿಗಳಲ್ಲಿ ಪ್ರವಾಹ ಭೀತಿ ಉಂಟು ಮಾಡಿದೆ.
ಆಗುಂಬೆಯ ಘಾಟಿ ರಸ್ತೆಯ 14 ನೇ ತಿರುವಿನಲ್ಲಿ ತಡೆಗೋಡೆ ಕುಸಿದು ಬಿದ್ದ ಪ್ರದೇಶಕ್ಕೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ರಸ್ತೆ ಕುಸಿದ ಪ್ರದೇಶದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮವನ್ನು ತಾಲೂಕು ಆಡಳಿತ ಕೈಗೊಂಡಿದೆ. ಆಗುಂಬೆ ಘಾಟಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸರಕು-ಸಾಗಾಣೆ ವಾಹನಗಳ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ.
ಮಳೆ ವಿವರ: ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ, 37.81 ಮಿಲಿ ಮೀಟರ್ (ಮಿ.ಮೀ.) ಆಗಿದೆ.
ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತ...
ಸಾಗರ ತಾಲೂಕಿನಲ್ಲಿ ಎಡೆಬಿಡದೆ ಬೀಳುತ್ತಿರುವ ವರ್ಷಧಾರೆಯಿಂದ ವರದಾ, ಕನ್ನಹೊಳೆ ಸೇರಿದಂತೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಕಾನಲೆ, ಸೈದೂರು, ಹಿರೆನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಡಗಳಲೆ, ಗಡೆಮನೆ, ಅತ್ತಿಸಾಲ, ಹಿರೆನಲ್ಲೂರು, ಕಾಗೋಡು, ಸಣ್ಣಮನೆ, ಸೂರುಗುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ತೋಟ ಜಲಾವೃತವಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮತ್ತೊಂದೆಡೆ ಸೊರಬ ತಾಲೂಕಿನ ಕಡಸೂರು ಮೊದಲಾದೆಡೆಯೂ ಪ್ರವಾಹ ಉಂಟಾಗಿದ್ದು, ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿರುವ ಮಾಹಿತಿಗಳು ಬಂದಿವೆ.
ವಿದ್ಯುತ್ ವ್ಯತ್ಯಯ : ಕತ್ತಲೆಯಲ್ಲಿ ಮುಳುಗಿದ ಆಗುಂಬೆ
ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ, ಕಳೆದ ಒಂದು ವಾರದಿಂದ ಎಡಬಿಡದೆ ಬೀಳುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ತತ್ತರಿಸಿ ಹೋಗಿದೆ. ಮತ್ತೊಂದೆಡೆ ಗಾಳಿ ಸಹಿತ ಬೀಳುತ್ತಿರುವ ಮಳೆಯಿಂದ ಹಲವೆಡೆ ಮರಗಳು ವಿದ್ಯುತ್ ತಂತಿ ಮೇಲೆ ಉರುಳಿ ಬೀಳುತ್ತಿವೆ. ಇದರಿಂದ ಆಗುಂಬೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದೆ. ಕಳೆದೆರೆಡು ದಿನಗಳಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು, ಸುಗಮ ವಿದ್ಯುತ್ ಪೂರೈಕೆಗೆ ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳು ಇನ್ನಿಲ್ಲದ ಹರಸಾಹಸ ನಡೆಸುವಂತಾಗಿದೆ.
ಹೊಸನಗರದಲ್ಲಿ ಕೊಟ್ಟಿಗೆ ಮೇಲೆ ಬಿದ್ದ ತೆಂಗಿನಮರ
ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಾಹ್ಮಣವಾರ ಗ್ರಾಮದಲ್ಲಿ ಗಾಳಿ-ಮಳೆಯಿಂದ, ದಿವಾಕರ ಎಂಬುವರ ಮನೆಯ ಕೊಟ್ಟಿಗೆ ಮೇಲೆ ತೆಂಗಿನಮರವೊಂದು ಉರುಳಿ ಬಿದ್ದಿದೆ. ಇದರಿಂದ ಕೊಟ್ಟಿಗೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಸಾವಿರಾರು ರೂ. ನಷ್ಟ ಸಂಭವಿಸಿದೆ. ಉಳಿದಂತೆ ಯಾವುದೇ ಅನಾಹುತದ ಮಾಹಿತಿಗಳು ಲಭ್ಯವಾಗಿಲ್ಲ.