ಇಸ್ರೇಲ್-ಹಮಾಸ್ ನಡುವೆ ಯುದ್ಧವಿರಾಮ?
ಸ್ಫೋಟದಲ್ಲಿ ಇಬ್ಬರು ಫೆಲೆಸ್ತೀನಿಯರು ಮೃತ
ಜೆರುಸಲೇಮ್, ಜು. 15: ಗಾಝಾದ ಕಟ್ಟಡವೊಂದರಲ್ಲಿ ರವಿವಾರ ಸಂಭವಿಸಿದ ಸ್ಫೋಟವೊಂದರಲ್ಲಿ ಇಬ್ಬರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾ ಪಟ್ಟಿಯಲ್ಲಿ ಯುದ್ಧವಿರಾಮ ಏರ್ಪಟ್ಟ ಗಂಟೆಗಳ ಬಳಿಕ ಸ್ಫೋಟ ನಡೆದಿದ್ದು, ತಕ್ಷಣಕ್ಕೆ ಕಾರಣ ಗೊತ್ತಾಗಿಲ್ಲ.
ಮೃತಪಟ್ಟವರು ತಂದೆ ಮತ್ತು ಮಗ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಗಾಝಾ ಗಡಿ ಪ್ರದೇಶದ ಉದ್ದಕ್ಕೂ ವಿಧಿಸಲಾಗಿದ್ದ ನಿರ್ಬಂಧಗಳನ್ನು ಇಸ್ರೇಲ್ ಸೇನೆ ತೆರವುಗೊಳಿಸಿದೆ. ಹಮಾಸ್ ಬಂಡುಕೋರರೊಂದಿಗಿನ ತೀವ್ರ 24-ತಾಸು ಕಾಳಗವನ್ನು ಕೊನೆಗೊಳಿಸಲು ಈಜಿಪ್ಟ್ ಮಧ್ಯಸ್ಥಿಕೆಯ ಯುದ್ಧವಿರಾಮವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂಬುದರ ಸೂಚನೆ ಇದಾಗಿದೆ.
ಈ ಪ್ರದೇಶದ ಪ್ರಸಿದ್ಧ ಬೀಚನ್ನು ಇಸ್ರೇಲ್ ಮುಚ್ಚಿತ್ತು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರ ಮೇಲೆ ನಿರ್ಬಂಧಗಳನ್ನು ಹೇರಿತ್ತು.
ಆದರೆ, ಬೇಸಿಗೆ ಶಿಬಿರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಹಾಗೂ ದೈನಂದಿನ ಕಾರ್ಯಗಳನ್ನು ಆರಂಭಿಸಬಹುದಾಗಿದೆ ಎಂದು ಇಸ್ರೇಲ್ ರವಿವಾರ ಹೇಳಿದೆ.
2014ರ ಯುದ್ಧದ ಬಳಿಕದ ಅತಿ ದೊಡ್ಡ ವಾಯು ದಾಳಿಯನ್ನು ಇಸ್ರೇಲ್ ಶನಿವಾರ ಗಾಝಾದ ಮೇಲೆ ನಡೆಸಿದೆ. ಅದೇ ವೇಳೆ, ಹಮಾಸ್ ಬಂಡುಕೋರರು ಶನಿವಾರ ದಿನವಿಡೀ ಡಝನ್ಗಟ್ಟಳೆ ರಾಕೆಟ್ಗಳನ್ನು ಇಸ್ರೇಲ್ನತ್ತ ಹಾರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಉದ್ರಿಕ್ತ ಗಡಿಯಲ್ಲಿ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಭೀತಿ ಎದುರಾಗಿತ್ತು.