ಸರಕಾರ ನಡೆಸಲು ಸಮನ್ವಯತೆ ಅಗತ್ಯ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಜು. 16: ಮೈತ್ರಿಕೂಟ ಸರಕಾರಕ್ಕೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಅಭಯ ನೀಡಿರುವ ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಒಂದು ಸರಕಾರವನ್ನು ನಡೆಸಬೇಕಾದರೆ ಸಮನ್ವಯತೆ ಅಗತ್ಯ ಎಂದು ಹೇಳಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ತಾನು ಅವರೊಂದಿಗೆ ಮಾತನಾಡಿದ್ದು, ವೇದಿಕೆಯ ಮೇಲೆ ಭಾವುಕರಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ ಎಂದರು.
ಮೈತ್ರಿ ಸರಕಾರ ಅಂದಮೇಲೆ ಕೆಲ ಸಣ್ಣ-ಪುಟ್ಟ ಸಮಸ್ಯೆ ಇರುತ್ತವೆ. ಆ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ನಾವು ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದ ಅವರು, ಮಾಜಿ ಸ್ಪೀಕರ್ ಕೋಳಿವಾಡ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
‘ಸಿಎಂ ಕುಮಾರಸ್ವಾಮಿಯವರ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ. ಪಕ್ಷಕ್ಕೆ ಈ ಸ್ಥಿತಿ ಬರಬೇಕಾದರೆ ಅದಕ್ಕೆ ಮೂಲ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಹೊರತು, ಬೇರೆ ಯಾರೂ ಅಲ್ಲ. ಸಿದ್ದರಾಮಯ್ಯ ಅವರ ನಡೆ ಕಾಂಗ್ರೆಸ್ಸಿಗೆ ತಟ್ಟಿದೆ. ಮೈತ್ರಿ ಸರಕಾರ ಮುಂದುವರಿಕೆ ಕೆಲವರಿಗೆ ಬೇಕಿಲ್ಲ’
-ಕೆ.ಬಿ.ಕೋಳಿವಾಡ ಮಾಜಿ ಸ್ಪೀಕರ್







