ಕಸಾಪ ನಿರ್ಣಯ ಪ್ರಶ್ನಿಸಿ ಪತ್ರ ಚಳವಳಿ ನಿಯಮಬಾಹಿರ: ಮನು ಬಾಳಿಗಾರ್
ಬೆಂಗಳೂರು, ಜು.16: ಕನ್ನಡ ಸಾಹಿತ್ಯ ಪರಿಷತ್ ಮಾ.15ರಂದು ಉಡುಪಿಯ ಕೋಟಾದಲ್ಲಿ ನಡೆದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಂಡಿತವಾದ ತಿದ್ದುಪಡಿಗಳನ್ನು ಪ್ರಶ್ನಿಸಿ ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿರುವ ಪತ್ರ ಚಳವಳಿ ಕಾನೂನು ಬಾಹಿರವೆಂದು ಕಸಾಪ ಅಧ್ಯಕ್ಷ ಮನು ಬಾಳಿಗಾರ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಮಾ.15ರಂದು ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಂಡಿತವಾದ ಎಲ್ಲ ತಿದ್ದುಪಡಿಗಳು ಪ್ರತಿ ಶತ ತೊಂಬತ್ತೊಂಬತ್ತಕ್ಕಿಂತಲೂ ಹೆಚ್ಚಿಗೆ (99.12%) ಮತ ಪಡೆದು ನಿರ್ಣಯವಾಗಿ ಅಂಗೀಕೃತವಾಗಿವೆ. ಆದರೆ, ಇದನ್ನು ಪ್ರಶ್ನಿಸಿ ಕನ್ನಡ ಸಂಘರ್ಷ ಸಮಿತಿಯು ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದನ್ನು ಪರಿಶೀಲಿಸಿದ ಸಿವಿಲ್ ನ್ಯಾಯಾಲಯ ಪ್ರಜಾಪ್ರಭುತ್ವ ದೇಶದಲ್ಲಿ ಜನರ ತೀರ್ಮಾನವೇ ಅಂತಿಮ, ಯಾರೂ ಇದನ್ನು ಪ್ರಶ್ನಿಸಲಾಗದು ಎಂದು ಸರ್ವಸದಸ್ಯರ ವಿಶೇಷ ಸಭೆಯ ನಡಾವಳಿ ತಿದ್ದುಪಡಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದೆ.
ಈ ಹಿಂದೆ, ಕನ್ನಡ ಸಾಹಿತ್ಯ ಪರಿಷತ್‌ನ ನಿಬಂಧನೆಗಳ ತಿದ್ದುಪಡಿಯ ಬಗ್ಗೆ ಹಾಗೂ ಕೋಟಾದ ವಿಶೇಷ ಸಕಲ ಸದಸ್ಯರ ಸಭೆಯ ಬಗ್ಗೆ ಶಿವಕುಮಾರ್ ಕುರ್ಕಿ ಎಂಬುವವರು ದಾಖಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ತಮ್ಮ ಸಮಸ್ಯೆಗಳನ್ನು ಕರ್ನಾಟಕ ಸರಕಾರದ ಸಹಕಾರ ಸಂಘಗಳ ನಿಬಂಧಕರ ಬಳಿ ಬಗೆಹರಿಸಿಕೊಳ್ಳಿ ಎಂದು ತೀರ್ಪು ನೀಡಿ ವಜಾಗೊಳಿಸಿದೆ.
ಹೈ ಕೋರ್ಟ್‌ನ ತೀರ್ಪಿನಿಂದ ಹತಾಶೆಗೊಂಡಿರುವ ಕನ್ನಡ ಸಂಘರ್ಷ ಸಮಿತಿಯ ಡಾ.ಕೋ.ವೆಂ.ರಾಮಕೃಷ್ಣೇಗೌಡ ಹಾಗೂ ಅವರ ಸಂಗಡಿಗರು ಈಗ ಪತ್ರಚಳವಳಿಗೆ ಕರೆ ನೀಡಿರುವುದು ದುರದೃಷ್ಟಕರ ಹಾಗೂ ಅಸೂಯೆುಂದ ತುಂಬಿರುವುದು ಆಗಿದೆ. ನ್ಯಾಯಾಲಯದ ತೀರ್ಪನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ನಿಯಮಗಳನ್ನು, ಅಂತೆಯೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಲ್ಲರೂ ಗೌರವಿಸಬೇಕಾಗಿದೆ ಎಂದು ಕಸಾಪ ಅಧ್ಯಕ್ಷ ಮನ ಬಳಿಗಾರ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಿಸಿದ್ದಾರೆ.







