ಅಪಘಾತಗಳ ಬಗ್ಗೆ ಮಾಹಿತಿ ನೀಡಿದರೆ ಕೇಸು ಹಾಕಲ್ಲ: ಎಸ್ಪಿ ನಿಂಬರ್ಗಿ
ಎಸ್ಪಿ ಪ್ರಶ್ನೆ: ಉತ್ತರಕ್ಕೆ ಚಾಕಲೇಟ್

ಉಡುಪಿ, ಜು.16: ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಸಹಾಯ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದವರ ವಿರುದ್ಧ ಪ್ರಕರಣ ದಾಖಲಿಸ ಲಾಗುತ್ತದೆ ಎಂಬ ತಪ್ಪು ಮಾಹಿತಿ ಜನರಲ್ಲಿ ಇದೆ. ಪೊಲೀಸರಿಗೆ ಮಾಹಿತಿ ನೀಡಿದರೆ ಯಾರ ಮೇಲೂ ಪ್ರಕರಣ ದಾಖಲಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಉಡುಪಿ ರೋಟರಿ ವತಿಯಿಂದ ನಿಟ್ಟೂರು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ರಸ್ತೆ ಸುರಕ್ಷತೆ ಮತ್ತು ರಸ್ತೆ ಸಂಚಾರ ಜಾಗೃತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಡೀ ಜಗತ್ತಿನ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಭಾರತದಲ್ಲಿ ಶೇ.1ರಷ್ಟು ವಾಹನಗಳಿದ್ದರೆ, ಜಗತ್ತಿನಲ್ಲಿ ನಡೆಯುವ ಅಪಘಾತದಲ್ಲಿ ಒಟ್ಟು ಮೃತಪಟ್ಟವರಲ್ಲಿ ಶೇ.10ರಷ್ಟು ಭಾರತೀಯರಿದ್ದಾರೆ. ದೇಶದಲ್ಲಿ ಕರ್ನಾಟಕವು ಅಪಘಾತ ಗಳ ಸಂಖ್ಯೆಯಲ್ಲಿ ಐದನೆ ಸ್ಥಾನದಲ್ಲಿದೆ ಎಂದರು.
ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿ ಅವರ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಮೂಡಲು ಭಾರತದ ಚಲನಚಿತ್ರಗಳು ಮುಖ್ಯ ಕಾರಣ. ಸಮಾಜದಲ್ಲಿ ಪೊಲೀಸರೇ ಇಲ್ಲದಿದ್ದರೆ ಏನೆಲ್ಲ ಬದಲಾವಣೆಗಳು ಆಗುತ್ತಿತ್ತೆಂಬುದೇ ಊಹಿಸು ವುದು ಅಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಎ. ಶೆಟ್ಟಿ, ಸಹಾಯಕ ವಲಯ 4ರ ಸಹಾಯಕ ಗವರ್ನರ್ ಡಾ.ಗಣೇಶ್, ವಲಯ ತರಬೇತುದಾರ ಡಾ.ಸುರೇಶ್ ಶೆಣೈ, ಜನಾರ್ದನ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ರೋಟರಿಯ ಅಧ್ಯಕ್ಷರಾದ ಎ.ಎಚ್.ಚಂದ್ರಶೇಖರ್ ಸ್ವಾಗತಿಸಿ ದರು. ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ವಂದಿಸಿದರು. ರಾಮಚಂದ್ರ ಉಪಾಧ್ಯಯ ಕಾರ್ಯಕ್ರಮ ನಿರೂಪಿಸಿದರು.
ಎಸ್ಪಿ ಪ್ರಶ್ನೆ: ಉತ್ತರಕ್ಕೆ ಚಾಕಲೇಟ್
ರಸ್ತೆ ಸುರಕ್ಷತೆ ಹಾಗೂ ಸಂಚಾರದ ಕುರಿತು ಪಾಠ ಮಾಡಿದ ಎಸ್ಪಿ ಲಕ್ಷ್ಮಣ್ ನಿಂಬರಗಿ, ಈ ಸಂಬಂಧ ಪ್ರಶ್ನೆಗಳಿಗೆ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಚಾಕ ಲೇಟ್‌ನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದರು.
ರಸ್ತೆ ಸುರಕ್ಷತೆಯ ಬಗ್ಗೆ ನಮಗೆ ಯಾಕೆ ಮಾಹಿತಿ ಇರಬೇಕು, ಅಪಘಾತ ಸಂಭವಿಸಿದಾಗ ಏನು ಮಾಡಬೇಕು ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಎಸ್ಪಿ ಮಕ್ಕಳಲ್ಲಿ ಕೇಳಿದರು. ಇದಕ್ಕೆ ಸಮರ್ಥವಾಗಿ ಉತ್ತರ ನೀಡಿದ ಮಕ್ಕಳಿಗೆ ಚಾಕಲೇಟ್ ಬಹುಮಾನವನ್ನು ಎಸ್ಪಿ ನೀಡಿದರು.







