ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿಗೆ ಮುಖ್ಯಮಂತ್ರಿಯ ಕಾರು ಹಂಚಿಕೆ

ಬೆಂಗಳೂರು, ಜು.16: ತಮಗೆ ಹಂಚಿಕೆಯಾಗಿದ್ದ ಟೊಯೋಟಾ ಫಾರ್ಚೂನರ್ ಕಾರನ್ನು ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿಗೆ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯು ಸರಕಾರದ ವತಿಯಿಂದ ಮುಖ್ಯಮಂತ್ರಿ ಆದಿಯಾಗಿ ಎಲ್ಲ ನೂತನ ಸಚಿವರಿಗೆ ಸರಕಾರಿ ಕಾರುಗಳನ್ನು ಹಂಚಿಕೆ ಮಾಡಿತ್ತು. ಆದರೆ, ತಮಗೆ ಹಂಚಿಕೆಯಾಗಿದ್ದ ಕಾರನ್ನು ಉಪಯೋಗಿಸದೆ, ತಮ್ಮ ಸ್ವಂತ ಕಾರನ್ನೆ ಬಳಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಳಸದೆ ಇರುವ ಕಾರನ್ನು ತಮಗೆ ನೀಡುವಂತೆ ಉಪ ಸಭಾಧ್ಯಕ್ಷರು ಮುಖ್ಯಮಂತ್ರಿಗೆ ಕೋರಿದ್ದರು. ಅಲ್ಲದೆ, ಈ ಸಂಬಂಧ ವಿಧಾನಸಭೆ ಸಚಿವಾಲಯಕ್ಕೂ ಪತ್ರ ಬರೆದು ಮುಖ್ಯಮಂತ್ರಿ ಬಳಸದೆ ಇರುವ ಕಾರನ್ನು ನೀಡುವಂತೆ ಕೇಳಿದ್ದರು. ಅದರಂತೆ, ಕುಮಾರಸ್ವಾಮಿ, ತಮಗೆ ಹಂಚಿಕೆಯಾಗಿದ್ದ ಕಾರನ್ನು ಕೃಷ್ಣಾರೆಡ್ಡಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.





