‘ಕಾಂಗ್ರೆಸ್ ಬಲವರ್ಧನೆಗೆ ಯುವ ಪಡೆ ಸಜ್ಜುಗೊಳಿಸಲು ದಿನೇಶ್ ಗುಂಡೂರಾವ್ ಸಿದ್ಧತೆ’

ಬೆಂಗಳೂರು, ಜು.16: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಮುಂದಾಗಿರುವ ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷ ಸಂಘಟನೆಗಾಗಿ ಯುವ ಪಡೆ ಸಜ್ಜುಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಪದಾಧಿಕಾರಿಗಳನ್ನಾಗಿ ಯುವಕರು, ಉತ್ಸಾಹಿಗಳಿಗೆ ಅವಕಾಶ ಕೊಟ್ಟು ಹೊಸ ತಂಡವನ್ನು ಕಟ್ಟಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಇದರಿಂದಾಗಿ, ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಡಾ.ಜಿ.ಪರಮೇಶ್ವರ್, ಅವರಿಗೆ ಮುಂಚಿತವಾಗಿ ಆರ್.ವಿ.ದೇಶಪಾಂಡೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೇಮಕವಾಗಿದ್ದ ಬಹುಪಾಲು ಪದಾಧಿಕಾರಿಗಳು ಇಂದಿಗೂ ಪಕ್ಷದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಹಿರಿಯ ಮುಖಂಡರು ಪಕ್ಷ ಸಂಘಟನೆ ಕೆಲಸದಲ್ಲಿ ಸಕ್ರಿಯ ಹಾಗೂ ಚುರುಕಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಆದುದರಿಂದ, ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಆಸಕ್ತಿಹೊಂದಿರುವ ಉತ್ಸಾಹಿ ಯುವಕರಿಗೆ ಪಕ್ಷದಲ್ಲಿ ಅವಕಾಶ ಕಲ್ಪಿಸಿಕೊಡಲು ದಿನೇಶ್ ಗುಂಡೂರಾವ್ ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆ ಚುನಾವಣೆಗೆ ಮುನ್ನ ನೂರಾರು ಮಂದಿಯನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಆದರೆ, ಪಕ್ಷದ ಸಂಘಟನೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಕಂಡು ಬಂದಿರಲಿಲ್ಲ. ಇದಂದಾಗಿ, ಕೆಪಿಸಿಸಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದು ಪಕ್ಷಕ್ಕೆ ಹೊಸ ರೂಪ ನೀಡುವ ಉದ್ದೇಶವನ್ನು ದಿನೇಶ್ ಗುಂಡೂರಾವ್ ಹೊಂದಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಯುವಕರ ಪಡೆಯ ಅಗತ್ಯವಿರುವುದರಿಂದ, ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಪಕ್ಷ ಸಂಘಟನೆಗಾಗಿ ಯುವಕರ ಪಡೆಯನ್ನು ಕಟ್ಟಿರುವ ಮಾದರಿಯನ್ನು ನಮ್ಮ ರಾಜ್ಯದಲ್ಲಿಯೂ ಪ್ರಯೋಗಿಸಲು ಕೆಪಿಸಿಸಿ ಅಧ್ಯಕ್ಷರು ಮುಂದಾಗಿದ್ದಾರೆ.
ಆದರೆ, ತಮ್ಮ ಮಹತ್ವದ ಈ ಆಲೋಚನೆಗೆ ರಾಜ್ಯದ ಹಿರಿಯ ನಾಯಕರು ಸಹಕಾರ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ದಿನೇಶ್ ಗುಂಡೂರಾವ್‌ಗೆ ಕಾಡುತ್ತಿದೆ. ಅಲ್ಲದೆ, ಹೊಸ ಪಡೆ ಕಟ್ಟುವಾಗ ನಿರೀಕ್ಷಿತವಾಗಿ ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ತಮ್ಮ ಬೆಂಬಲಿಗರನ್ನು ಆ ಪಡೆಯೊಳಗೆ ಸೇರಿಸಲು ಪ್ರಯತ್ನಿಸುವುದನ್ನು ಅಲ್ಲಗೆಳೆಯುವಂತಿಲ್ಲ.







