ಇಂದಿರಾ ಕ್ಯಾಂಟೀನ್‌ಗೆ 5.40 ಕೋಟಿ ಫಲಾನುಭವಿಗಳು: ಸಚಿವ ಖಾದರ್

ಮಂಗಳೂರು, ಜು.16: ಇಂದಿರಾ ಕ್ಯಾಂಟೀನ್ ಮೂಲಕ ಜೂನ್ 2018ರ ವೇಳೆಗೆ 5.40 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುತ್ತಾರೆ. ಜನತೆಯಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯನ್ನು ಸಹಿಸದ ಪ್ರತಿಪಕ್ಷದ ಶಾಸಕರೊಬ್ಬರು ಆಧಾರ ರಹಿತವಾಗಿ ಆರೋಪ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 50 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪ ಮಾಡುತ್ತಿರುವ ವಿಪಕ್ಷದ ಶಾಸಕ ರಾಮದಾಸ್ ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜಕೀಯ ರಹಿತವಾಗಿ ಜನರಿಗೆ ಉಪಯೋಗವಾಗುವ ಯೋಜನೆಗಳಿಗೆ ಪೋತ್ಸಾಹ ನೀಡಬೇಕಾಗಿದೆ ಬದಲಾಗಿ ಜನಸಾಮಾನ್ಯರ ನಡುವೆ ಗೊಂದಲ ಸೃಷ್ಟಿಸುತ್ತಿರುವುದು ಅದು ಅವರಿಗೆ ಶೋಭೆ ತರುವಂತಹುದಲ್ಲ. ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕಾದ ಹೊಣೆಗಾರಿಕೆ ಅವರಿಗಿದೆ ಎಂದು ಖಾದರ್ ತಿಳಿಸಿದ್ದಾರೆ.
ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ 263 ಇಂದಿರಾ ಕ್ಯಾಂಟೀನ್ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಈ ಪೈಕಿ ಅಡುಗೆ ಸ್ಥಳ ಹೊಂದಿರುವ ಇಂದಿರಾ ಕ್ಯಾಂಟೀನ್ 171,ಅಡುಗೆ ತಯಾರಿ ಮನೆ ಇಲ್ಲದ ಇಂದಿರಾ ಕಾಂಟೀನ್ 71 ಮತ್ತು ಕ್ಯಾಂಟೀನ್ ಮಾತ್ರ ಇರುವ ಕೇಂದ್ರಗಳು 15 ಎಂದು ನಿಗದಿಪಡಿಸಲಾಗಿತ್ತು.
ಈ ಪೈಕಿ 72 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು ,37 ಕಾಮಗಾರಿ ಪ್ರಗತಿಯಲ್ಲಿದೆ. 70 ಉದ್ಘಾಟನೆಗೆ ಸಿದ್ಧಗೊಂಡಿದೆ. ಇದುವರೆಗೆ 211.24 ಕೋಟಿ ಬಿಡುಗಡೆಯಾಗಿ ವೆಚ್ಚವಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಸದ್ಯ ಮಂಗಳೂರು ತಾಲೂಕಿನಲ್ಲಿ 6ಇದೆ. ಮುಂದೆ ಬಂಟ್ವಾಳ, ಪುತ್ತೂರು, ಸುಳ್ಯದಲ್ಲೂ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ 198 ಕ್ಯಾಂಟೀನ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 198 ವ್ಯಾಪ್ತಿಯಲ್ಲಿ 198 ಕ್ಯಾಂಟೀನ್ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಪೈಕಿ 175 ಸ್ಥಿರ ಇಂದಿರಾ ಕ್ಯಾಂಟೀನ್, 20 ಅಡುಗೆ ಕೇಂದ್ರಗಳು, 24 ಸಂಚಾರಿ ಇಂದಿರಾ ಕ್ಯಾಂಟೀನ್ ರೂ. 78.85 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲಾಪು ಹಾಗೂ ಫರಂಗಿಪೇಟೆಗೆ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮಂಜೂರಾತಿಗೊಂಡಿದೆ. 6 ರಿಂದ 10ನೆ ತರಗತಿಯವರಗೆ ಆಂಗ್ಲ ಮಾಧ್ಯಮದಲ್ಲಿ ಕಲಿಕೆ ಮುಂದುವರಿಸಲು ಇಲ್ಲಿ ಅವಕಾಶವಿರುತ್ತದೆ ಎಂದು ಹೇಳಿದರು. ಮುಡಿಪು -ಇರಾ ಪ್ರದೇಶದ ರಸ್ತೆ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮೂಲಕ 10.50ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ, ಸಂತೋಷ್ ಶೆಟ್ಟಿ, ಮೆಲ್ವಿನ್ ಪಿಂಟೋ, ಸದಾಶಿವ ಉಳ್ಳಾಲ, ಲೋಕೇಶ್ ಹೆಗ್ಡೆ, ಫಝಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.







