ಜು. 23ರಿಂದ ರಸ್ತೆಯ ಗುಂಡಿ ಮುಚ್ಚಿಸಲು ಸೂಚನೆ: ಸಚಿವ ಖಾದರ್

ಮಂಗಳೂರು, ಜು.16: ದ.ಕ.ಜಿಲ್ಲೆಯಲ್ಲಿ 112 ಮತ್ತು ಉಡುಪಿ ಜಿಲ್ಲೆಯಲ್ಲಿ 119 ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳಿವೆ. ಉಭಯ ಜಿಲ್ಲೆಗಳ ಈ ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಗುಂಡಿಗಳನ್ನು ಜು.23ರಿಂದ ಮುಚ್ಚಿಸಲು ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಲೋಕೋಪಯೋಗಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ದ.ಕ.ಮತ್ತು ಉಡುಪಿ ಜಿಲ್ಲೆಯ ಶಾಸಕರುಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮಳೆಗಾಲಕ್ಕೆ ಮುನ್ನವೇ ರಸ್ತೆಗಳನ್ನು ದುಸ್ಥಿತಿಯಲ್ಲಿಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಕಳಪೆ ಮಾಡುತ್ತಾರೆ ಎಂಬ ಆರೋಪವಿದೆ. ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು. ಗುತ್ತಿಗೆದಾರರು ಕೂಡಾ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಮಗಾರಿಗಳಲ್ಲಿ ಕಳಪೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಲು ಸೂಚನೆ ನೀಡಲಾಗಿದೆ ಎಂದು ಖಾದರ್ ಹೇಳಿದರು.
ಕುಸಿತಗೊಂಡಿರುವ ಮುಲ್ಲರಪಟ್ಣ ಸೇತುವೆಯನ್ನು ತಾತ್ಕಾಲಿಕವಾಗಿ ಪುನಃ ಜೋಡಿಸಲು ಸಾಧ್ಯವೇ ಎಂದು ಪರಿಶೀಲಿಸಲು ರಕ್ಷಣಾ ಮತ್ತು ಸೇನೆಯ ನೆರವು ಪಡೆಯಲಾಗುವುದು. ಒಂದು ವೇಳೆ ಪುನಃ ಜೋಡಿಸಲು ಸಾಧ್ಯವಾದರೆ ಲಘು ವಾಹನಗಳಿಗೆ ಅಥವಾ ಮನುಷ್ಯರ ಓಡಾಟಕ್ಕಾದರೂ ಬಳಸಬಹುದಾಗಿದೆ ಎಂದು ಖಾದರ್ ಹೇಳಿದರು.
ಗುರುಪುರ ಸೇತುವೆಯ ದುರಸ್ತಿಗೆ 7.5 ಕೋ.ರೂ. ಮತ್ತು ಹೊಸ ಸೇತುವೆಗೆ 18 ಕೋ.ರೂ. ಅಂದಾಜು ಬೇಕಾಗುತ್ತದೆ. ಈ ಸೇತುವೆಯ ದುರಸ್ತಿಗಿಂತ ಹೊಸ ಸೇತುವೆ ನಿರ್ಮಿಸುವ ಬಗ್ಗೆ ಪ್ರಯತ್ನ ಮುಂದುವರಿಯಲಿದೆ ಎಂದು ಖಾದರ್ ತಿಳಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತೀಯೊಂದು ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ತಲಾ 50 ಕೋ.ರೂ.ಮೊತ್ತದ ಪ್ರಸ್ತಾವ ಕಳುಹಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಈ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖಾ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಖಾದರ್ ಹೇಳಿದರು.
ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ನೀಲ ನಕಾಶೆಯೊಂದನ್ನು ರೂಪಿಸಲಾಗುವುದು. ಅಲ್ಲದೆ ಜಿಲ್ಲಾಮಟ್ಟದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಜೊತೆಗೂಡಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ರಾಜ್ಯಮಟ್ಟದಲ್ಲಿ ಇತ್ಯರ್ಥಗೊಳಿಸಬಹುದಾದ ಸಮಸ್ಯೆಗಳನ್ನು ಮುಖ್ಯಮಂತ್ರಿಯ ಜೊತೆ ಬೆಂಗಳೂರಿನಲ್ಲಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ರಾಷ್ಟ್ರಮಟ್ಟದಲ್ಲಿ ಇತ್ಯರ್ಥ ಪಡಿಸಬಹುದಾದ ಸಮಸ್ಯೆಯನ್ನು ಪರಿಹರಿಸಲು ದೆಹಲಿಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳ ನಿಯೋಗವೊಂದು ತೆರಳಲಾಗುವುದು. ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸಿ ಕ್ರಮ ಕೈಗೊಳ್ಳ ಲಾಗುವುದು ಎಂದು ಖಾದರ್ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ, ಮುಡಾ ವ್ಯಾಪ್ತಿಯಲ್ಲಿ ಆ.15ರೊಳಗೆ ಆನ್‌ಲೈನ್ ಮೂಲಕವೇ ಎಲ್ಲ ಅರ್ಜಿ ಪ್ರಕ್ರಿಯೆ, ನೋಂದಣಿ, ಪಾವತಿ ಇತ್ಯಾದಿಗೆ ಕ್ರಮ ಕೈಗೊಳ್ಳಲಾಗುವುದು. ಮುಡಾ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಿಸುವಾಗ ಆಸುಪಾಸಿನವರಿಗೆ ಸಮಸ್ಯೆಗಳು ಎದುರಾಗದಂತೆ ಸೂಕ್ತ ನಿಯಮಾವಳಿ ರೂಪಿಸಲು ಮನಪಾ ಮತ್ತು ಮುಡಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರು ಎದುರಿಸುವ ಕನ್‌ವರ್ಶನ್, 9-11, ಸಿಂಗಲ್‌ಸೈಟ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಖಾದರ್ ಹೇಳಿದರು.







