ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ: ನೀರವ್ ಮೋದಿ ಪತ್ತೆಗೆ ಸಿಂಗಾಪುರ ತಲುಪಿದ ಇಡಿ ತಂಡ

ಹೊಸದಿಲ್ಲಿ, ಜು. 16: ಪಿಎನ್ ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಜ್ರೋದ್ಯಮಿ ನೀರವ್ ಮೋದಿ ಅವರ ಪತ್ತೆಗೆ ಜಾರಿ ನಿರ್ದೇಶನಾಲಯದ ಮೂವರು ಸದಸ್ಯರ ತಂಡ ಸಿಂಗಾಪುರ ತಲುಪಿದೆ. ನೀರವ್ ಮೋದಿ ವಿರುದ್ಧ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಮ್ಮ ತಂಡ ಸಿಂಗಾಪುರಕ್ಕೆ ತಲುಪಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ವಂಚನೆ ಪ್ರಕರಣ ಬಹಿರಂಗವಾಗುವ ತಿಂಗಳ ಮೊದಲೇ ಭಾರತದಿಂದ ಪರಾರಿಯಾಗಿರುವುದರಿಂದ ನೀರವ್ ಮೋದಿ ಹಾಗೂ ಅವರ ಮಾವ ಮೆಹುಲ್ ಚೋಕ್ಸಿ ಅವರನ್ನು ‘ಪರಾರಿಯಾದವರು’ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಬುಧವಾರ ಮುಂಬೈಯ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಜುಲೈ 2ರಂದು ಇಂಟರ್‌ಪೋಲ್ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಹಗರಣ ಸಿಬಿಐಗೆ ವರದಿಯಾಗುವುದಕ್ಕಿಂತ ವಾರಗಳ ಹಿಂದೆ ಜನವರಿ ಮೊದಲ ವಾರದಲ್ಲಿ ನೀರವ್ ಮೋದಿ ಕುಟುಂಬ ದೊಂದಿಗೆ ಭಾರತ ತ್ಯಜಿಸಿದ್ದರು. ಅಮೆರಿಕದ ನಾಗರಿಕಳಾಗಿರುವ ಅವರ ಪತ್ನಿ ಅಮಿ ಜನವರಿ 6ರಂದು ಹಾಗೂ ಚೋಕ್ಸಿ ಜನವರಿ 4ರಂದು ಭಾರತ ತ್ಯಜಿಸಿದ್ದರು.
Next Story





