ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳು ಕೋರ್ಟ್‌ಗೆ ಹಾಜರು
ಸಾಕ್ಷಿ ವಿಚಾರಣೆ ಮತ್ತೆ ಆರಂಭ

ಉಡುಪಿ, ಜು.16: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿ ವಿಚಾರಣೆಯು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಮತ್ತೆ ಆರಂಭಗೊಂಡಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಜೇಶ್ವರಿ ಶೆಟ್ಟಿ ಸಹಿತ ಮೂವರು ಆರೋಪಿಗಳನ್ನು ವಿಚಾರಣೆ ಸಂದರ್ಭ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಜು.6ರಂದು ಇಡೀ ದಿನದ ವಿಚಾರಣೆ ಬಳಿಕ ಮುಂದೂಡಲಾಗಿದ್ದ ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಹಾಗೂ ಪ್ರಸ್ತುತ ಕಾರವಾರ ಎಸಿಬಿ ಡಿವೈಎಸ್ಪಿಯಾಗಿರುವ ಎಸ್.ವಿ. ಗಿರೀಶ್ ಅವರ ಮುಖ್ಯ ವಿಚಾರಣೆಯು ಇಂದು ಕೂಡ ಮುಂದುವರೆದಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ವಿಚಾರಣೆಯಲ್ಲಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ, ಗಿರೀಶ್ ಅವರಿಂದ ಸಾಕ್ಷಿ ಹೇಳಿಕೆ ಪಡೆದು ಕೊಂಡರು.
ಎಸ್.ವಿ.ಗಿರೀಶ್ ಮುಖ್ಯ ವಿಚಾರಣೆ ಇಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜು.17ರಂದು ಅವರ ಅಡ್ಡ ವಿಚಾರಣೆಗೆ ಅವಕಾಶ ನೀಡಿ ನ್ಯಾಯಾಧೀಶ ವೆಂಕಟೇಶ್ ಟಿ.ನಾಯ್ಕಾ ಆದೇಶ ನೀಡಿದರು. ಆರೋಪಿಗಳ ಪರ ವಕೀಲರಾದ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ಅಡ್ಡ ವಿಚಾರಣೆ ಯನ್ನು ನಾಳೆ ನಡೆಸಲಿದ್ದಾರೆ. ಆರಂಭದಲ್ಲಿ ಎಸ್.ವಿ.ಗಿರೀಶ್, ನಂತರ ಸಮಯಾವಕಾಶ ಇದ್ದರೆ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿಯನ್ನು ಅಡ್ಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಹಾಜರು: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರಿಂದ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂದಿನ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆರೋಪಿ ಪರ ವಕೀಲರ ಮನವಿಯಂತೆ ಆರೋಪಿಗಳನ್ನು ಉಡುಪಿಗೆ ಕರೆತರುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಅದರಂತೆ ಪೊಲೀಸರು ಜು.15ರಂದು ಮೂವರು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರು ಜೈಲಿನಿಂದ ಕರೆತಂದು ರಾತ್ರಿ ವೇಳೆ ಮಂಗಳೂರು ಜೈಲಿನಲ್ಲಿ ಇರಿಸಿದ್ದರು. ಈ ಮೂವರನ್ನು ಇಂದು ಬೆಳಗ್ಗೆ ಮಂಗಳೂರು ಜೈಲಿ ನಿಂದ ಉಡುಪಿಗೆ ಕರೆ ತಂದು ವಿಚಾರಣೆಯ ಸಂದರ್ಭ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ಸಂದರ್ಭ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಕೂಡ ಹಾಜರಿದ್ದರು.
ವಿಚಾರಣೆಯ ಬಳಿಕ ಸಂಜೆ ವೇಳೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಮಂಗಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು. ಜು.19ರವರೆಗೆ ನಡೆಯುವ ವಿಚಾರಣೆಗೆ ಪ್ರತಿದಿನ ಪೊಲೀಸರು ಆರೋಪಿಗಳನ್ನು ಮಂಗಳೂರು ಜೈಲಿನಿಂದ ಕರೆದುಕೊಂಡು ಬಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಈ ಮಧ್ಯೆ ಆರೋಪಿಗಳ ಹಾಜರಾತಿ ಅಗತ್ಯ ಇಲ್ಲದಿದ್ದರೆ ಅವರನ್ನು ಬೆಂಗಳೂರು ಜೈಲಿಗೆ ಕರೆದೊಯ್ಯಲು ನ್ಯಾಯಾಲಯ ಆದೇಶ ನೀಡುವ ಸಾಧ್ಯತೆಗಳಿವೆ.
ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಪತ್ರಕರ್ತರು ನ್ಯಾಯಾಲಯದೊಳಗೆ ಹೋಗದಂತೆ ಪೊಲೀಸರು ನಿರ್ಬಂಧ ಹೇರಿದ್ದರು.
ಕೋರ್ಟ್ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಲೋಹ ಶೋಧಕ ಯಂತ್ರವನ್ನು ಅಳ ವಡಿಸಲಾಗಿದ್ದು, ನ್ಯಾಯಾಲಯದೊಳಗೆ ವಕೀಲರ ಹೊರತು ಯಾರಿಗೂ ಪ್ರವೇಶ ಇರಲಿಲ್ಲ. ಕೋರ್ಟ್‌ನ ಒಳಗೆ ಮತ್ತು ಹೊರಗಡೆ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿತ್ತು. ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಸಹಿತ ಇತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.







