ಹುಸೇನಬ್ಬ ಪ್ರಕರಣ: ಜು.17ರಂದು ಸಿಐಡಿ ಎಡಿಜಿಪಿ ಉಡುಪಿಗೆ
ಉಡುಪಿ, ಜು.16: ಪೆರ್ಡೂರು ಸಮೀಪ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ (62) ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಈ ಸಂಬಂಧ ಜು.17ರಂದು ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಉಡುಪಿಗೆ ಆಗಮಿಸಲಿದ್ದಾರೆ.
ಜೂ.17ರಂದು ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ತಂಡವು ಉಡುಪಿಗೆ ಆಗಮಿಸಿ, ಪ್ರಕರಣದ ತನಿಖೆ ಆರಂಭಿಸಿದ್ದು, ಈ ತಂಡವು ಹಿರಿ ಯಡ್ಕ ಪೊಲೀಸ್ ಠಾಣೆ ಹಾಗೂ ಕೊಲೆ ನಡೆದ ಸ್ಥಳ ಹಾಗೂ ಜೊಕಟ್ಟೆಯಲ್ಲಿ ರುವ ಹುಸೇನಬ್ಬರ ಮನೆಗಳಿಗೆ ತೆರಳಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು.
ಇದೀಗ ತನಿಖೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಉಡುಪಿಗೆ ಆಗಮಿಸುತ್ತಿದ್ದು, ಇವರು ಕೂಡ ಹಿರಿಯಡ್ಕ ಠಾಣೆ ಹಾಗೂ ಜೋಕಟ್ಟೆಗೆ ತೆರಳಿ ತನಿಖೆ ನಡೆಸಲಿದ್ದಾರೆ. ಅಲ್ಲದೆ ಜಿಲ್ಲಾ ಎಸ್ಪಿ ಲಕ್ಷ್ಮಣ್ ಅವರಿಂದಲೂ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೆರ್ಡೂರು ಶೇನರಬೆಟ್ಟು ಎಂಬಲ್ಲಿ ಮೇ 30ರಂದು ಬೆಳಗಿನ ಜಾವ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದ ಹುಸೇನಬ್ಬ ಹಿರಿಯಡ್ಕ ಪೊಲೀಸರ ಜೀಪಿನಲ್ಲಿ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಪೊಲೀಸರು ಹಾಗೂ ಬಜರಂಗದಳ ಕಾರ್ಯಕರ್ತರು ಹಾಡಿಯಲ್ಲಿ ಎಸೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡ್ಕ ಎಸ್ಸೈ ಸಹಿತ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಹುಸೇನಬ್ಬರ ಸಾವು ಹಿರಿಯಡಕ ಪೊಲೀಸ್ ಜೀಪಿನಲ್ಲಿ ಆಗಿ ರುವುದರಿಂದ ಇದನ್ನು ಪೊಲೀಸ್ ಕಸ್ಟಡಿಯ ಸಾವು ಎಂದು ಪರಿಗಣಿಸಿ ಸಿಐಡಿ ತನಿಖೆಗೆ ವರ್ಗಾಯಿಸಲಾಗಿತ್ತು.







