ಶ್ರೀಧರ ಹಂದೆ ಹಂದೆಗೆ ವನಜ ರಂಗಮನೆ ಪ್ರಶಸ್ತಿ

ಕೋಟ, ಜು.16: ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರವು ರಂಗಮನೆ ಸ್ಥಾಪಕಿ, ಕಲಾ ಪೋಷಕಿ ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2018ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಗುರು, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಎಚ್.ಶ್ರೀಧರ ಹಂದೆ ಕೋಟ ಇವರಿಗೆ ನೀಡಲಾಗುವುದು ಎಂದು ರಂಗನಿರ್ದೇಶಕ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.
ಮಕ್ಕಳ ಯಕ್ಷಗಾನ ಮೇಳವೆಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿ ಸಾಕಾರಗೊಳಿಸಿದ ಕೀರ್ತಿ ಶ್ರೀಧರ ಹಂದೆ ಅವರಿಗೆ ಸಲ್ಲುತ್ತದೆ. 40 ವರ್ಷ ಕಾಲ ಹಿಂದಿ ಉಪನ್ಯಾಸಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಇವರು, 1991ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮರಿಂದ ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಸಾಲಿಗ್ರಾಮ ಮಕ್ಕಳ ಮೇಳದ ಮೂಲಕ, ಮಕ್ಕಳಿಗೆ ಯಕ್ಷಕಲೆಯಲ್ಲಿ ಶಾಸ್ತ್ರೀಯವಾಗಿ ತರಬೇತಿ ನೀಡಿದವರು. ಭಾರತ ಮಾತ್ರವಲ್ಲ ಅಮೇರಿಕಾ, ಬಹರೈನ್, ಲಂಡನ್, ಮೆಂಚೆಸ್ಟರ್ ಮುಂತಾದೆಡೆ ಪ್ರದರ್ಶನ ನೀಡುವ ಮೂಲಕ ಯಕ್ಷಗಾನವನ್ನು ವಿಶ್ವವ್ಯಾಪಿಗೊಳಿಸಲು ಶ್ರಮಿಸಿದವರು. ಕಳೆದ 43 ವರ್ಷಗಳಲ್ಲಿ 2000ಕ್ಕೂ ಅಧಿಕ ಮಕ್ಕಳ ಯಕ್ಷ ಪ್ರದರ್ಶನವನ್ನು ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ನೀಡಿದ್ದಾರೆ.
ಭಾಗವತ, ಗಮಕಿ, ಕವಿ, ನಟ-ನಿರ್ದೆಶಕ, ನಾಟಕಕಾರ ಹಾಗೂ ಸಂಘಟಕ ನಾಗಿಯೂ ಗುರುತಿಸಿಕೊಂಡಿರುವ ಹಂದೆ ಅವರಿಗೆ ಆ.12ರಂದು ಸುಳ್ಯ ರಂಗಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾ ಗುವುದು. ಪ್ರಶಸ್ತಿ ಶಾಶ್ವತ ಫಲಕ, ಕಲಾತ್ಮಕ ಸ್ಮರಣಿಕೆ, ಶಾಲು, ಪಲಪುಷ್ಪ ಗಳೊಂದಿಗೆ ಹತ್ತು ಸಾವಿರ ರೂ. ನಗದು ಹೊಂದಿರುತ್ತದೆ ಎಂು ರಂಗಮನೆಯ ಪ್ರಕಟಣೆ ತಿಳಿಸಿದೆ.







