ಪಾಟೀಲ ಪುಟ್ಟಪ್ಪ ಹೇಳಿಕೆ ನಾಡಿನ ಅಖಂಡತೆಗೆ ಮಾಡಿದ ದ್ರೋಹ: ಸಾಹಿತಿ ಮಳಲಿ ವಸಂತಕುಮಾರ್
ಮೈಸೂರು,ಜು.17: ಪ್ರಾದೇಶಿಕ ಅಸಮತೋಲನವನ್ನು ಸರಿದೂಗಿಸಲು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿಗೆ ಮುಂದಾಗಿರುವ ಹಿರಿಯರಾದ ಪಾಟೀಲ ಪುಟ್ಟಪ್ಪ ಅವರ ನಡೆಯು ನಾಡಿನ ಅಖಂಡತೆಗೆ ಮಾಡಿದ ದ್ರೋಹ ಬಗೆದಂತೆ ಎಂದು ಸಾಹಿತಿ ಡಾ.ಮಳಲಿ ವಸಂತಕುಮಾರ್ ಟೀಕಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಹೈದರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕವನ್ನು ಲಘುವಾಗಿ ಪರಿಗಣಿಸಲಾಗಿದೆ. ಅಲ್ಲದೇ ಯಾವುದೇ ಯೋಜನೆಗಳ ಪ್ರಸ್ತಾವನೆಯು ಇಲ್ಲದೇ ಈ ಭಾಗಕ್ಕೆ ಅನ್ಯಾಯವೆಸಗಲಾಗಿದೆ. ಹಾಗಾಗಿ ಕರ್ನಾಟಕವನ್ನು ವಿಭಜಿಸಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕರಿಸುವಂತೆ ಹೇಳಿಕೆ ನೀಡಿರುವುದು ನಾಡದ್ರೋಹದ ಕೃತ್ಯವೆಂದು ಅವರು ಆರೋಪಿಸಿದ್ದಾರೆ.
ಆರ್ಥಿಕ ಅಸಮತೋಲನವೂ ಸೇರಿದಂತೆ ರಾಜ್ಯದ ಒಳಗೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ವಿಚಾರಾತ್ಮಕ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪ್ರತ್ಯೇಕತೆಯ ಕೂಗು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳು ಮಾತ್ರ ಅಗಿರುವುದರಿಂದ ರಾಜ್ಯದ ಹಿತದೃಷ್ಟಿಯಿಂದ ಇನ್ನಷ್ಟು ಸಮಯಾವಕಾಶ ನೀಡಬೇಕು. ಅಲ್ಲದೇ ಪಾಟೀಲ ಪುಟ್ಟಪ್ಪ ಅವರು ನೀಡುವ ಸಲಹೆಗಳನ್ನು ಕುಮಾರಸ್ವಾಮಿ ಅವರು ಗೌರವಯುತವಾಗಿ ಸ್ವೀಕರಿಸಿದ್ದಾರೆ. ಆದ್ದರಿಂದ ನಾಡಿನ ಅಭಿವೃದ್ಧಿ, ಭಾಷೆ, ನೆಲ, ಜಲದ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕುವೆಂಪು ಅವರ ನಾಡಗೀತೆ ಬಗ್ಗೆಯೂ ಹಿಂದೆ ಪಾಟೀಲ ಪುಟ್ಟಪ್ಪ ಅವರು ಅಪಸ್ಪರ ಎತ್ತಿದ್ದರು. ಈಗಲೂ ಇದೇ ವರ್ತನೆ ಮುಂದುವರಿಸಿರುವ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ನಾಡು, ನುಡಿಗೆ ಕಂಟಕವನ್ನುಂಟು ಮಾಡುವಂತೆ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನಿಲ್ಲಿಸದಿದ್ದರೆ ಅವರನ್ನು ನಾಡಿನಿಂದ ಗಡಿಪಾರು ಮಾಡುವಂತೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.







