ಆಳ್ವಾಸ್: ಬಿಸಿನೆಸ್ ಇಂಗ್ಲಿಷ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
ಮೂಡುಬಿದಿರೆ, ಜು. 16: ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸುವ ಕೇಂಬ್ರಿಡ್ಜ್ ಇಂಗ್ಲಿಷ್ ಲ್ಯಾಗ್ವೇಜ್ ಆ್ಯಸೆಸ್ಮೆಂಟ್ ಪರೀಕ್ಷೆ (ಬಿಸಿನೆಸ್ ಇಂಗ್ಲಿಷ್ ಸರ್ಟಿಫಿಕೇಟ್)ಯಲ್ಲಿ, ಪರೀಕ್ಷೆ ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇಕಡಾ 100 ಫಲಿತಾಂಶ ಗಳಿಸಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪದವಿ ಕಾಲೇಜಿನ 162 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿ, ಯಶಸ್ವಿಯಾಗಿದ್ದಾರೆ. ಆಳ್ವಾಸ್ ಪದವಿ ಕಾಲೇಜು ಸತತ ಎರಡನೆ ಬಾರಿಗೆ ಶೇಕಡಾ 100ರಷ್ಟು ಫಲಿತಾಂಶವನ್ನು ಪಡೆದ ತರಬೇತಿ ಕೇಂದ್ರವಾಗಿದೆ. ಕೇಂಬ್ರಿಡ್ಜ್ ಇಂಗ್ಲಿಷ್ ಲ್ಯಾಗ್ವೇಜ್ ಆ್ಯಸೆಸ್ಮೆಂಟ್ ಪರೀಕ್ಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪರೀಕ್ಷೆಯಾಗಿದ್ದು, ವರ್ಷಕ್ಕೆ ಸುಮಾರು 5.5 ಮಿಲಿಯನ್‌ನಷ್ಟು ಜನರು ಪ್ರಪಂಚದಾದ್ಯಂತ ಉತ್ತೀರ್ಣರಾಗುತ್ತಾರೆ. ಪ್ರಪಂಚದ 130 ದೇಶದಲ್ಲಿ 2800 ಪರೀಕ್ಷಾ ಕೇಂದ್ರವನ್ನು ಹೊಂದಿದ್ದು, 50,000 ತರಬೇತಿ ಕೇಂದ್ರವನ್ನು ಹೊಂದಿದೆ. ಸುಮಾರು 20,000 ವಿಶ್ವವಿದ್ಯಾಲಯಗಳಲ್ಲಿ ಈ ಪರೀಕ್ಷೆ ಮಾನ್ಯತೆ ಪಡೆದಿದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇಂಗ್ಲಿಷ್ ಭಾಷಾ ಕೌಶಲದಲ್ಲಿ ಹಿಡಿತ ಸಾಧಿಸುವುದರೊಂದಿಗೆ, ಹೊರಜಗತ್ತಿನಲ್ಲಿ ಪರಿಣಾಮಕಾರಿಯಾಗಿ ವ್ಯವಹರಿಸಲು ಸಹಕಾರಿಯಾಗಿದೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪಡೆಯುವುದರೊಂದಿಗೆ, ವಿಫುಲ ಉದ್ಯೋಗ ಅವಕಾಶ ಪಡೆಯಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ಸಹಕಾರಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ತಿಳಿಸಿದರು.





