ತೆಂಗಿನ ನಾರು ಮಹಾಮಂಡಳಿ ಹಾಗೂ ನಿಗಮದ ಪುನಶ್ಚೇತನಕ್ಕೆ ಕ್ರಮ: ಸಚಿವ ಎಸ್.ಆರ್ ಶ್ರೀನಿವಾಸ್
ತುಮಕೂರು,ಜು.16: ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾ ಮಂಡಳಿ ನಿ., ಹಾಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಸಣ್ಣ ಕೈಗಾರಿಕ ಸಚಿವ ಎಸ್. ಆರ್. ಶ್ರೀನಿವಾಸ್ ತಿಳಿಸಿದ್ದಾರೆ.
ಗುಬ್ಬಿ ತಾಲೂಕಿನ ಹೇರೂರಿನಲ್ಲಿರುವ ತೆಂಗಿನ ನಾರಿನ ಕರಕುಶಲ ಕೇಂದ್ರದಲ್ಲಿಂದು ಆಯೋಜಿಸಿದ್ದ ತೆಂಗಿನ ನಾರಿನ ಕುಶಕರ್ಮಿಗಳಿಗೆ ಅನುರೂಪ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಣ್ಣ ಕೈಗಾರಿಕ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದಾಗ ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾ ಮಂಡಳಿ ನಿ., ಹಾಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಷ್ಠದಲ್ಲಿರುವುದು ತಿಳಿಯಿತು. ಈ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಸಣ್ಣ ಕೈಗಾರಿಕೆ ಇಲಾಖೆಗೆ ಹಿಂದಿನ ಬಜೆಟ್‍ನಲ್ಲಿ 192 ಕೋಟಿ ರೂ ಅನುದಾನ ಒದಗಿಸಲಾಗಿತ್ತು. ಈ ಸಾಲಿನ ಬಜೆಟ್‍ನಲ್ಲಿ 416 ಕೋಟಿ ರೂಗಳ ಅನುದಾನ ಒದಗಿಸಲಾಗಿದೆ. ಕೇರಳದಲ್ಲಿ ತೆಂಗಿನ ನಾರಿನ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಇದು ಎಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಹೊಸ ತಾಂತ್ರಿಕತೆ ಮತ್ತಿತರ ಅಂಶಗಳ ಬಗ್ಗೆ ಅಂದಾಜು ಯೋಜನೆಯನ್ನು ರೂಪಿಸಿ ನೀಡಿದ್ದಲ್ಲಿ, ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತೆಂಗಿನ ನಾರಿನ ಕುಶಲಕರ್ಮಿಗಳ ಜೀವನಮಟ್ಟ ಸುಧಾರಿಸಲು ಇಲ್ಲಿಯವರೆಗೂ ನಿಗಮದ ಮತ್ತು ಮಂಡಳಿಯ ಅಧೀನದಲ್ಲಿರುವ ತೆಂಗಿನ ನಾರಿನ ಉತ್ಪಾದನ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕುಶಲಕರ್ಮಿಗಳಿಗೆ ಅನುರೂಪ ವೇತನ ನೀಡಲಾಗುತ್ತಿದೆ. ಇನ್ನು ಮುಂದೆ 2018-19 ನೇ ಸಾಲಿನಿಂದ ಈ ಯೋಜನೆಯನ್ನು ಖಾಸಗಿ ವಲಯದ ತೆಂಗಿನ ನಾರಿನ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವ ಕುಶಲಕರ್ಮಿಗಳಿಗೂ ವಿಸ್ತರಿಸಲಾಗಿದೆ ಎಂದು ಸಚಿವ ಶ್ರೀನಿವಾಸ್ ನುಡಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾ ಮಂಡಳಿ ನಿ., ಅಡಿ ಕಾರ್ಯನಿರ್ವಹಿಸುವ 25 ತೆಂಗಿನ ನಾರಿನ ಕುಶಲಕರ್ಮಿಗಳಿಗೆ ಹಾಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಡಿ ಕೆಲಸ ನಿರ್ಮಿಸುವ ತೆಂಗಿನ ನಾರಿನ ಕುಶಲಕರ್ಮಿಗಳಿಗೆ ಅನುರೂಪ ವೇತನದ ಚೆಕ್‍ನ್ನು ಸಚಿವರು ವಿತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುಟ್ಟಸೋಮಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾ ಮಂಡಳಿ ನಿ.,ಯ ಅಧ್ಯಕ್ಷ ಎಂ.ಕೆ.ಪುಟ್ಟರಾಜು., ಉಪಾಧ್ಯಕ್ಷ ಕೆ.ಹೆಚ್.ಕುಮಾರಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಡಾ. ಅರುಣ್‍ಕುಮಾರ್ ಹೆಚ್.ಆರ್. ನಿಗಮದ ವ್ಯವಸ್ಥಾಪಕ ಜಿ ಕುಮಾರಸ್ವಾಮಿ, ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕ ಎಲ್.ನಾಗರಾಜ್, ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಗ್ರಾ.ಪಂ.ಸದಸ್ಯರಾದ ಸುಮಾ ನಾಗರಾಜ್, ತಾಲೂಕು ಪಂಚಾಯತ್ ಸದಸ್ಯೆ ಜಿ. ಕಲ್ಪನ, ಸೇರಿದಂತೆ ಮಂಡಳಿಯ ನಿರ್ದೇಶಕರು ಹಾಜರಿದ್ದರು.