ಆ.5: ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಮಂಗಳೂರು, ಜು.16: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) 2018-2021ನೇ ಸಾಲಿನ ರಾಜ್ಯ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು ಆ.5ರಂದು ನಡೆಯಲಿದೆ.
ಅಧ್ಯಕ್ಷರು (ಒಂದು ಹುದ್ದೆ-ಕೇಂದ್ರ ಸ್ಥಾನ), ಉಪಾಧ್ಯಕ್ಷರು (ಮೂರು ಹುದ್ದೆ- ಒಂದು ಕೇಂದ್ರ ಸ್ಥಾನ, ಎರಡು ಗ್ರಾಮೀಣ), ಪ್ರಧಾನ ಕಾರ್ಯದರ್ಶಿ (ಒಂದು ಹುದ್ದೆ-ಕೇಂದ್ರ ಸ್ಥಾನ), ಕಾರ್ಯದರ್ಶಿಗಳು (ಮೂರು ಹುದ್ದೆ-ಒಂದು ಕೇಂದ್ರ ಸ್ಥಾನ, ಎರಡು ಗ್ರಾಮೀಣ), ಖಜಾಂಚಿ (ಒಂದು ಹುದ್ದೆ-ಕೇಂದ್ರ ಸ್ಥಾನ). ಇದರೊಂದಿಗೆ ಜಿಲ್ಲಾ ಕಾರ್ಯಕಾರಿಣಿಯ 15 ಸದಸ್ಯರು, ರಾಜ್ಯ ಸಮಿತಿಗೆ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಒಬ್ಬ ಅಭ್ಯರ್ಥಿಯು ಪದಾಧಿಕಾರಿ ಹುದ್ದೆ ಅಥವಾ ಕಾರ್ಯಕಾರಿ ಸಮಿತಿ ಸದಸ್ಯತ್ವ ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಸ್ಪರ್ಧಿಸಬಹುದು.
ಜಿಲ್ಲಾ ಪದಾಧಿಕಾರಿ ಸ್ಥಾನಕ್ಕೆ 2,000 ರೂ. ಠೇವಣಿ, ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ 1,000 ರೂ. ಠೇವಣಿ ಕಟ್ಟಬೇಕು. ಸ್ಪರ್ಧೆ ಬಯಸುವ ಅಭ್ಯರ್ಥಿಗಳು ಸಂಘದಲ್ಲಿ ನಾಲ್ಕು ವರ್ಷ ನಿರಂತರವಾಗಿ ಸದಸ್ಯತ್ವ ಹೊಂದಿರಬೇಕು. 2017ರಲ್ಲಿ ಸದಸ್ಯತ್ವದ ಪಟ್ಟಿಯು ಚುನಾವಣೆಯ ಮತದಾರರ ಪಟ್ಟಿ ಆಗಿರುತ್ತದೆ. ಜಿಲ್ಲಾ ಪದಾಧಿಕಾರಿ ಹುದ್ದೆಗೆ ಸ್ಪರ್ಧೆ ಬಯಸುವವರು ಒಮ್ಮೆಯಾದರೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರಲೇಬೇಕು.
ಜಿಲ್ಲಾ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವವರು ಆಯಾ ಜಿಲ್ಲಾ ಘಟಕದ ಚುನಾವಣಾಧಿಕಾರಿಯ ಕೈಗೆ ನಾಮಪತ್ರವನ್ನು ಸಲ್ಲಿಸಬೇಕು. ರಾಜ್ಯ ಪದಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸುವವರು ರಾಜ್ಯ ಸಂಘದ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಸಮ್ಮುಖದಲ್ಲಿ ಅಥವಾ ಅವರಿಂದ ಅಧಿಕಾರ ಪಡೆದವರಿಗೆ ನೇರವಾಗಿ ನಾಮಪತ್ರ ಸಲ್ಲಿಸಬೇಕು. ಜಿಲ್ಲಾ ಘಟಕಕ್ಕೆ ಎರಡು ಬಾರಿ ಸತತವಾಗಿ ಒಂದೇ ಹುದ್ದೆಗೆ ಆಯ್ಕೆಯಾಗಿದ್ದವರು ಮೂರನೇ ಅವಧಿಗೆ ಅದೇ ಹುದ್ದೆಗೆ ಸ್ಪರ್ಧಿಸುವಂತಿಲ್ಲ. ಜಿಲ್ಲಾ ಸಂಘದ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವವರು ಜಿಲ್ಲಾ ವಾರ್ತಾ ಇಲಾಖೆ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.