ಟ್ಯಾಂಕರ್‌ಗಳನ್ನು ತಡೆದು ಲೀಟರ್ ಗಟ್ಟಲೆ ಹಾಲನ್ನು ರಸ್ತೆಗೆ ಸುರಿದರು

ಮುಂಬೈ,ಜು.16: ಹೈನುಗಾರರಿಂದ ಖರೀದಿಸುವ ಪ್ರತಿ ಲೀ.ಹಾಲಿಗೆ ಐದು ರೂ.ಹೆಚ್ಚಿನ ಬೆಲೆಯನ್ನು ನೀಡುವಂತೆ ಬೇಡಿಕೆಯೊಂದಿಗೆ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಮುಖ ಡೇರಿಗಳು ಸೋಮವಾರದಿಂದ ರೈತರಿಂದ ಹಾಲು ಖರೀದಿಯನ್ನು ಸ್ಥಗಿತಗೊಳಿಸಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಟ್ಯಾಂಕರ್‌ಗಳನ್ನು ತಡೆದ ರೈತರು ಅವುಗಳಲ್ಲಿದ್ದ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.
ಸೋಮವಾರದಿಂದ ಮುಂಬೈ ಮತ್ತು ಪುಣೆ ನಗರಗಳಿಗೆ ಹಾಲಿನ ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಕೊಲ್ಲಾಪುರದ ಸಂಸದ ರಾಜು ಶೆಟ್ಟಿ ನೇತೃತ್ವದ ಸಂಘಟನೆಯು ಕರೆ ನೀಡಿತ್ತು. ಹಾಲಿನ ಬೆಲೆಗಳಲ್ಲಿ ಏರಿಳಿತಗಳಿಂದ ರಕ್ಷಿಸಿಕೊಳ್ಳಲು ರೈತರಿಗೆ ಪ್ರತಿ ಲೀ.ಗೆ ಐದು ರೂ.ಗಳ ನೇರ ಸಬ್ಸಿಡಿಗಾಗಿ ಸಂಘಟನೆಯು ಆಗ್ರಹಿಸುತ್ತಿದೆ. ಡೇರಿಗಳು ಪ್ರಸ್ತುತ ಹಾಲಿನಲ್ಲಿರುವ ಕೊಬ್ಬಿನ ಅಂಶವನ್ನು ಅವಲಂಬಿಸಿ ಪ್ರತಿ ಲೀ.ಗೆ 17ರಿಂದ 23 ರೂ.ದರದಲ್ಲಿ ರೈತರಿಂದ ಖರೀದಿಸುತ್ತಿವೆ. ಸಂಸ್ಕರಣೆಯ ಬಳಿಕ ಇದೇ ಹಾಲನ್ನು ಗ್ರಾಹಕರಿಗೆ ಪ್ರತಿ ಲೀ.ಗೆ 42ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಲಾಭಾಂಶದಲ್ಲಿಯ ವ್ಯತ್ಯಾಸವನ್ನು ರೈತರಿಗೆ ನೀಡಲಾಗುತ್ತಿಲ್ಲ ಎನ್ನುವುದು ಸಂಘಟನೆಯ ಆರೋಪವಾಗಿದೆ.
ಕೊಲ್ಲಾಪುರದ ಗೋಕುಲ ಡೇರಿ ಮತ್ತು ಸಾಂಗ್ಲಿಯ ಚೈತಾಲಿ ಡೇರಿಗಳು ಸೋಮವಾರ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದ್ದವು. ಫಲ್ಟಣ್‌ನ ಗೋವಿಂದ ಡೇರಿಯೂ ಖರೀದಿಯನ್ನು ನಿಲ್ಲಿಸಿದೆ. ಆದರೆ ರೈತರು ಡೇರಿಗೆ ತಂದಿದ್ದ ಹಾಲನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮಹಾರಾಷ್ಟ್ರ ಪ್ರತಿದಿನ 1.42 ಕೋಟಿ ಲೀಟರ್ ಹಾಲನ್ನು ಖರೀದಿಸುತ್ತಿದೆ.
ಸೋಮವಾರ ಭಾರೀ ಪೊಲೀಸ್ ರಕ್ಷಣೆಯೊಂದಿಗೆ ಮುಂಬೈಗೆ ಹಾಲನ್ನು ರವಾನಿಸಲಾಗಿದೆ. ತನ್ನ ಮುಷ್ಕರವನ್ನು ತೀವ್ರಗೊಳಿಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಹಾಲಿನ ಖರೀದಿ ಮತ್ತು ನಗರ ಪ್ರದೇಶಗಳಿಗೆ ಹಾಲಿನ ಪೂರೈಕೆಯು ವ್ಯತ್ಯಯಗೊಳ್ಳಬಹುದೆಂದು ಡೇರಿಗಳು ಆತಂಕ ವ್ಯಕ್ತಪಡಿಸಿವೆ.
ವಸಯಿ ಮತ್ತು ವಿರಾರ್‌ಗಳಲ್ಲಿರುವ ಅಮುಲ್ ಡೇರಿಯ ಹಾಲು ಸಂಗ್ರಹಣಾ ಕೇಂದ್ರಗಳಿಗೂ ಮುಷ್ಕರದ ಬಿಸಿ ತಟ್ಟಿದೆ. ಸೋಮವಾರದಿಂದ ರೈತರಿಂದ ಹಾಲು ಖರೀದಿಸದಿರಲು ಅಮುಲ್ ನಿರ್ಧರಿಸಿದೆ. ಅದು ಮುಂಬೈ ಮಹಾನಗರಕ್ಕೆ ಏಕೈಕ ಅತ್ಯಂತ ದೊಡ್ಡ ಹಾಲು ಪೂರೈಕೆದಾರನಾಗಿದೆ.
ಅಮುಲ್‌ನ ಹಾಲು ಪೂರೈಕೆ ವ್ಯತ್ಯಯಗೊಂಡರೆ ಅದು ಗ್ರಾಹಕರ ಮೇಲೆ ಪರಿಣಾಮವನ್ನು ಬೀರಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಮುಂಬೈನಲ್ಲಿ ಪ್ರತಿದಿನ 55 ಲಕ್ಷ ಹಾಲಿನ ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದು,ಈ ಪೈಕಿ ಶೇ.30ರಷ್ಟು ಸಿಂಹಪಾಲು ಗುಜರಾತ ಮೂಲದ ಅಮುಲ್‌ನದ್ದಾಗಿದೆ. ನಂತರದ ಸ್ಥಾನದಲ್ಲಿ ಕೊಲ್ಲಾಪುರದ ಗೋಕುಲ ಡೇರಿಯಿದೆ.
ಹಾಲನ್ನು ಪೋಲು ಮಾಡುವುದು ನಮಗೆ ಸಂತೋಷ ನೀಡುತ್ತಿಲ್ಲ. ಆದರೆ ಸರಕಾರವು ಡೇರಿಗಳನ್ನು ರಕ್ಷಿಸುತ್ತಿದೆ ಮತ್ತು ರೈತರ ಸಂಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.
ಮುಷ್ಕರದ ಕೇಂದ್ರಬಿಂದುಗಳಾಗಿರುವ ಕೊಲ್ಲಾಪುರ,ಸಾಂಗ್ಲಿ,ಸತಾರಾ ಮತ್ತು ಪುಣೆ ಜಿಲ್ಲೆಗಳು ಪ್ರಮುಖ ಹಾಲು ಉತ್ಪಾದಕ ಕೇಂದ್ರಗಳಾಗಿದ್ದು,ಮುಂಬೈ ಮತ್ತು ಇತರ ಪ್ರಮುಖ ನಗರಗಳಿಗೆ ಹಾಲು ಪೂರೈಕೆಯಲ್ಲಿ ಸಿಂಹಪಾಲು ಹೊಂದಿವೆ. ಅಹ್ಮದ್‌ನಗರ,ನಾಸಿಕ್,ಜಲಗಾಂವ,ನಾಂದೇಡ್ ಮತ್ತು ಪರ್ಭನಿ ಜಿಲ್ಲೆಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತದೆ.
ತನ್ಮಧ್ಯೆ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮುಷ್ಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,ಯಾವುದೇ ವಿಷಯದ ಬಗ್ಗೆ ಮಾತುಕತೆಗಳಿಗೆ ಸರಕಾರವು ಮುಕ್ತ ಮನಸ್ಸು ಹೊಂದಿದೆ ಎಂದು ಹೇಳಿದರು. ಹಾಲು ಪೂರೈಕೆ ವ್ಯತ್ಯಯಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ ಅವರು,ತನ್ನ ಸರಕಾರವು ಯಾವುದೇ ವಿಷಯದಲ್ಲಿ ಪ್ರತಿಷ್ಠೆಯ ಧೋರಣೆಯನ್ನು ಹೊಂದಿಲ್ಲ. ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ಈ ಮುಷ್ಕರವು ನಡೆಯುತ್ತಿರುವ ರೀತಿ ಸರಿಯಲ್ಲ ಎಂದರು.







