ಕೇರಳದಲ್ಲಿ ಮತ್ತೆ ಮುಂಗಾರು ಮಳೆಯಬ್ಬರ: ಎಂಟು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ
ರೈಲು,ರಸ್ತೆ ಸಂಚಾರ ವ್ಯತ್ಯಯ

ತಿರುವನಂತಪುರ,ಜು.16: ಮುಂಗಾರು ಮಳೆ ಮತ್ತೊಮ್ಮೆ ಅಬ್ಬರಿಸುತ್ತಿದ್ದು,ಕೇರಳದ ವಿವಿಧ ಭಾಗಗಳಲ್ಲಿ ಸೋಮವಾರ ರೈಲು ಮತ್ತು ರಸ್ತೆ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜು.9ರಿಂದ 11 ಜನರು ಬಲಿಯಾಗಿದ್ದಾರೆ ಎಂದು ರಾಜ್ಯ ನಿಯಂತ್ರಣ ಕೊಠಡಿಯು ತಿಳಿಸಿದೆ. ಹಲವಾರು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು,ರಸ್ತೆ ಸಂಪರ್ಕ ಕಡಿತಗೊಂಡಿದೆ. ರೈಲು ಹಳಿಗಳಲ್ಲಿ ನೀರು ನಿಂತಿರುವುದರಿಂದ ಸಿಗ್ನಲ್ ವ್ಯವಸ್ಥೆಗೆ ವ್ಯತ್ಯಯವುಂಟಾಗಿದ್ದು,ಎರ್ನಾಕುಳಂ-ತಿರುವನಂತಪುರ ಮಾರ್ಗದಲ್ಲಿ ಕನಿಷ್ಠ ಎಂಟು ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇತರ ಕೆಲವು ರೈಲುಗಳು ವಿಳಂಬವಾಗಿ ಚಲಿಸುತ್ತಿವೆ. ತಿರುವನಂತಪುರದಲ್ಲಿಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ನೀರು ತುಂಬಿದ್ದು,ಸಾರಿಗೆ ಸೇವೆಗಳು ವ್ಯತ್ಯಯಗೊಂಡಿವೆ ಎಂದು ಅದು ತಿಳಿಸಿದೆ.
ತಿರುವನಂತಪುರ, ಕೊಲ್ಲಂ, ಪಟ್ಟಣಂಥಿಟ್ಟ, ಅಲಪುಝಾ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ ಮತ್ತು ತ್ರಿಶೂರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಕೇರಳ ವಿವಿಯು ಮಂಗಳವಾರ ನಡೆಯಲಿದ್ದ ತನ್ನೆಲ್ಲ ಪರೀಕ್ಷೆಗಳನ್ನು ಜು.21ಕ್ಕೆ ಮುಂದೂಡಿದೆ.
ಕೊಚ್ಚಿ ಬಳಿ ಮರದ ಕೊಂಬೆಯೊಂದು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದು ನಂತರ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಬೋಗಿಯ ಮೇಲೆ ಬಿದ್ದಿದ್ದರಿಂದ ರೈಲಿನ ಪ್ರಯಾಣ ವಿಳಂಬಗೊಂಡಿದೆ. ಆಲಪ್ಪುಳದಲ್ಲಿ ರೈಲುಹಳಿಗಳ ಮೇಲೆ ಮರ ಬಿದ್ದು ರೈಲುಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ. ಆಲಪ್ಪುಳ ಕುಟ್ಟನಾಡ ಪ್ರದೇಶದಲ್ಲಿ ಹಲವಾರು ಮನೆಗಳಿಗೆ ನೆರೆನೀರು ನುಗ್ಗಿದೆ. ರಾಜ್ಯದಲ್ಲಿ ಸುಮಾರು 2,000 ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇಡುಕ್ಕಿ ಜಿಲ್ಲೆಯಲ್ಲಿ ಒಂದೆರಡು ಕಡೆಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಕರಾವಳಿ ಪ್ರದೇಶಗಳಲ್ಲಿ ಕಡಲುಕೊರೆತ ತೀವ್ರಗೊಂಡಿದೆ ಎಂದೂ ಅವರು ಹೇಳಿದರು.







