ರಾಜ್ಯದ 8 ಕಡೆ ಎಸಿಬಿ ದಾಳಿ

ಬೆಂಗಳೂರು, ಜು.17: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ ತನಿಖಾಧಿಕಾರಿಗಳು, ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ಕಡೆ ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಲ್ಲಿನ ಕುಮಾರಕೃಪಾದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವಿಜಯಕುಮಾರ್ ಬಿ.ನಿರಾಲಿ ಅವರ ರಾಜಾಜಿನಗರದಲ್ಲಿನ ವಾಸದ ಮನೆ ಸೇರಿ ಎರಡು ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.
ಅದೇ ರೀತಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಗಂಗಯ್ಯ ಅವರ ವಾಸದ ಮನೆ ಹಾಗೂ ದೊಡ್ಡನಕ್ಕೇರಿ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕನಲ್ಲಿರುವ ತೋಟದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಕಾರ್ಯ ಮುಂದುವರೆಸಲಾಗಿದೆ.
ಚಿಕ್ಕಮಗಳೂರು: ಅರಣ್ಯ ಇಲಾಖೆಯ ಎಸಿಎಫ್ (ಸಾಮಾಜಿಕ ಅರಣ್ಯ ವಿಭಾಗ) ಕೆ.ಎನ್.ರಂಗಸ್ವಾಮಿ ಅವರ ಚಿಕ್ಕಮಗಳೂರುನಲ್ಲಿರುವ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ತನಿಖಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.







