ಕೊಪ್ಪ: ಭಾರೀ ಗಾಳಿ ಮಳೆಗೆ ವಿವಿಧೆಡೆ ಹಾನಿ; ಕೊಟ್ಟಿಗೆ ಕುಸಿದು ಜಾನುವಾರು ಸಾವು

ಕೊಪ್ಪ, ಜು.17: ಸೋಮವಾರ ರಾತ್ರಿ ಸುರಿದ ಭಾರೀ ಪ್ರಮಾಣದ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಹಾನಿ ಭಾರೀ ಆಸ್ತಿಪಾಸ್ತಿ ಉಂಟಾಗಿದೆ.
ತಾಲೂಕಿನ ಅಡಿಗೆ ಬೈಲು ಗ್ರಾಮದ ಹುಣ್ಸೆಮನೆ ವಾಸಿ ಎಚ್.ಕೆ. ಉಮೇಶ್ ಎಂಬವರ ಮನೆಯ ಹಿಂಬಾಗದ ಕೊಟ್ಟಿಗೆ ಬಿದ್ದು ಹೋಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎತ್ತು ಗೋಡೆಯ ಕಲ್ಲುಕಂಬ ಬಿದ್ದು ಮೃತಪಟ್ಟಿದೆ. ಇನ್ನೊಂದು ಎತ್ತು ಗಂಭಿರವಾಗಿ ಗಾಯಗೊಂಡಿದೆ.
ತಾಲೂಕಿನ ಎಲೆಮಡಲು ಗ್ರಾಮದ ಟಿ.ಡಿ.ಮಂಜಪ್ಪಗೌಡರ ಅಂಗಡಿ ಮಳಿಗೆಯ ಗೋಡೆ ಕುಸಿದು ಹಾನಿಯಾಗಿದೆ. ನಿಲುವಾಗಿಲು ಗ್ರಾಮದ ಸುರೇಶ್ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಎಲೆ ಮಡಲು ಗ್ರಾಮ ಮಡ್ಲೇಕಟ್ಟೆ ರಸ್ತೆ ಬಾಗಶಃ ಕುಸಿದುಹೋಗಿದೆ. ಸೋಮ್ಲಾಪುರ ಗ್ರಾಮದ ಕುಂಬ್ರಿಉಬ್ಬುವಿನ ಪ್ರೇಮಾ ಎಂಬವರ ಮನೆಯ ಸೌದೆ ಕೊಟ್ಟಿಗೆ ಕುಸಿದು ಬಿದ್ದಿದೆ. ಕೆಸವೆ ಗ್ರಾಮದ ಚೌಕಿ ವಾಸಿ ಶ್ರೀನಿವಾಸ್ ಎಂಬವರ ವಾಸದ ಮನೆಯ ಮುಂಬಾಗದ ಗೋಡೆ ಕುಸಿದು ಸುಮಾರು 35,000ರೂ. ನಷ್ಟ ಉಂಟಾಗಿದೆ. ಉತ್ತಮೇಶ್ವರ ಬಳಿ ರಸ್ತೆ ಬದಿಯ ಧರೆ ಕುಸಿದುಹೋಗಿದೆ.
ಕಿತ್ಲೆಕೊಡಿಗೆಯ ರಮೇಶ್ ಭಟ್ ಮನೆಯ ಹಿಂಭಾಗದ ಧರೆ ಮತ್ತುಷ್ಟು ಕುಸಿದಿದ್ದು, ಮನೆಯ ಹಿಂಭಾಗದ ಗೋಡೆಗೆ ಮಣ್ಣು ಜರಿದು ಬಿದ್ದ ಕಾರಣ ಗೋಡೆ ಬಿರುಕು ಬಿಟ್ಟಿದ್ದು, ಯಾವುದೇ ಸಂದರ್ಭದಲ್ಲೂ ಮನೆ ಬೀಳುವ ಸ್ಥಿತಿಯಲ್ಲಿದೆ ಎನ್ನಲಾಗಿದೆ.
ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ ಮಳೆ ಸ್ವಲ್ಪ ಬಿಡುವು ಪಡೆದಿದೆಯಾದರೂ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಆದರೆ ಭಾರೀ ಮಳೆ ಗಾಳಿಯಿಂದ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ 3-4 ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಪಟ್ಟಣ ವ್ಯಾಪ್ತಿಯಲ್ಲೂ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರವಾಗಿದೆ.







