ಸುಳ್ಳು ಸುದ್ದಿ ಬಿತ್ತರಿಸುವ ಮಾಧ್ಯಮಗಳ ವಿರುದ್ಧ ದೂರು ದಾಖಲು: ಮಾಜಿ ಸಚಿವ ಎಂ.ಬಿ.ಪಾಟೀಲ್
‘ರೌಡಿಶೀಟರ್ ಸೈಕಲ್ ರವಿಗೂ ನನಗೂ ಸಂಬಂಧವಿಲ್ಲ’

ಬೆಂಗಳೂರು, ಜು.17: ರೌಡಿ ಶೀಟರ್ ಸೈಕಲ್ ರವಿ ಯಾರು ಎಂಬುದು ನನಗೆ ಗೊತ್ತಿಲ್ಲ. ಆತನಿಗೂ ನನಗೂ ನಂಟಿದೆ ಎಂದು ತಪ್ಪು ಸುದ್ದಿಯನ್ನು ಪ್ರಕಟಿಸುವ ಮೂಲಕ ನನ್ನ ಚಾರಿತ್ರ್ಯವಧೆಗೆ ಮುಂದಾಗಿರುವ ಕೆಲವು ಮಾಧ್ಯಮಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
'ಸೈಕಲ್ ರವಿ ಜೊತೆ ನಾನು ನಂಟು ಹೊಂದಿದ್ದೇನೆ. ಅವರೊಂದಿಗೆ ಹಲವಾರು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಈ ಕುರಿತು ಸಿಸಿಬಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ' ಎಂಬ ಸುದ್ದಿಗಳನ್ನು ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಮತ್ತು ವಿವಿಧ ವೆಬ್ ಪತ್ರಿಕೆಗಳು ಪ್ರಕಟಿಸಿವೆ ಎಂದು ಅವರು ಹೇಳಿದ್ದಾರೆ.
ವಿಜಯಪುರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನನಗೆ ಆತ್ಮೀಯರು ಕರೆ ಮಾಡಿ ಸೈಕಲ್ ರವಿ ಜೊತೆ ನನ್ನ ಸಂಬಂಧವಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುತ್ತಿರುವ ವಿಚಾರ ತಿಳಿಸಿದಾಗ ನಾನು ಆಶ್ಚರ್ಯಚಕಿತನಾದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸೈಕಲ್ ರವಿ ಎನ್ನುವ ಹೆಸರು ನಾನು ಪ್ರಥಮ ಬಾರಿಗೆ ಕೇಳುತ್ತಿದ್ದೇನೆ. ಆತ ಯಾರು? ಆತನ ಹಿನ್ನೆಲೆಯೇನು? ಯಾವುದೇ ಮಾಹಿತಿ ನನಗಿಲ್ಲ. ಇಂತಹ ವ್ಯಕ್ತಿಯೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೇನೆ, ಮೆಸೇಜ್ ಕಳುಹಿಸಿದ್ದೇನೆ ಎಂದರೆ, ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸತೀಶ್‌ಕುಮಾರ್ ಅವರನ್ನು ಸಂಪರ್ಕಿಸಿ, ‘ಕೆಲವು ಟಿವಿ ವಾಹಿನಿಗಳಲ್ಲಿ ನನ್ನ ಕುರಿತು ಸುದ್ದಿ ಪ್ರಸಾರವಾಗುತ್ತಿರುವ ವಿಚಾರ ಪ್ರಸ್ತಾಪಿಸಿದಾಗ, ಅವರು ವಾಹಿನಿಗಳಲ್ಲಿ ರೌಡಿಶೀಟರ್ ಸೈಕಲ್ ರವಿ ದೂರವಾಣಿ ಸಂಖ್ಯೆ ಎಂದು ಹೇಳುತ್ತಿರುವ ನಂಬರ್ ಆತನದ್ದಲ್ಲ. ಅದು ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರಿಗೆ ಸೇರಿದ್ದು. ಮಾಧ್ಯಮಗಳು ಯಾಕೆ ಈ ರೀತಿ ಸುದ್ದಿ ಪ್ರಸಾರ ಮಾಡುತ್ತಿವೆ ಗೊತ್ತಿಲ್ಲ ಎಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲವು ಮಾಧ್ಯಮಗಳು ನನ್ನನ್ನು ಅಪರಾಧಿ ಸ್ಥಾನದಲ್ಲಿರಿಸಿ, ಸುದ್ದಿಯನ್ನು ಸತತವಾಗಿ ಪ್ರಸಾರ ಮಾಡಿವೆ. ಜವಾಬ್ದಾರಿಯುತ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವಾಗ ಆ ಸುದ್ದಿಯ ನೈಜತೆಯನ್ನು ಅರಿತುಕೊಳ್ಳದೆ, ಸುದ್ದಿಗಳನ್ನು ಬಿತ್ತರಿಸುವುದು ವಿಷಾದನೀಯ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತ ಸಚ್ಚಿದಾನಂದ, ನನ್ನ ಆತ್ಮೀಯ ಗೆಳೆಯ ಮಾಜಿ ಸಚಿವ ಅಂಬರೀಶ್ ಬೆಂಬಲಿಗನಾಗಿದ್ದು, ಹಲವಾರು ವರ್ಷಗಳಿಂದ ಪರಿಚಯವಿದೆ. ಈ ಬಾರಿ ಆತ ಶ್ರೀರಂಗಪಟ್ಟಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಬಯಸಿದ್ದ, ಅವನೊಂದಿಗೆ ನಾನು ಸಾಕಷ್ಟು ಬಾರಿ ಮಾತನಾಡಿದ್ದೇನೆ. ಆದರೆ, ಸಚ್ಚಿದಾನಂದ ಅವರ ನಂಬರ್ ಅನ್ನು ಸೈಕಲ್ ರವಿ ನಂಬರ್ ಎಂದು ಭಾವಿಸಿ, ತಪ್ಪು ಸುದ್ದಿಯನ್ನು ಪ್ರಕಟಿಸುವ ಮೂಲಕ ನನ್ನ ಚಾರಿತ್ರವಧೆಗೆ ಮುಂದಾಗಿರುವ, ಕೆಲವು ಮಾಧ್ಯಮಗಳು ಜನರಿಗೆ ತಪ್ಪು ಮಾಹಿತಿಯನ್ನು ನೀಡಿವೆ. ಈ ರೀತಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸಂಬಂಧಿತ ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಾರದ್ದೋ ಮೊಬೈಲ್ ನಂಬರ್ ಅನ್ನು ಎಂ.ಬಿ.ಪಾಟೀಲ್ ನಂಬರ್ ಎಂದು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಎಂ.ಬಿ.ಪಾಟೀಲ್‌ಗೂ ಸೈಕಲ್ ರವಿಗೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇನೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ







