ಕೆಪಿಎಸ್‌ಸಿ ಸದಸ್ಯ ಡಾ.ರೊನಾಲ್ಡ್ ಫೆರ್ನಾಂಡಿಸ್‌ಗೆ ಪ್ರೆಸ್‌ಕ್ಲಬ್‌ನಿಂದ ಅಭಿನಂದನೆ

ಮಂಗಳೂರು, ಜು.17: ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಮಂಗಳೂರು ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರನ್ನು ಪ್ರೆಸ್‌ಕ್ಲಬ್ ವತಿಯಿಂದ ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಭಿನಂದಿಸಲಾಯಿತು.
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಹಿರಿಯ ಪತ್ರಕರ್ತ ಗುರುವಪ್ಪಎನ್.ಟಿ. ಬಾಳೆಪುಣಿ ಪತ್ರಕರ್ತರೊಬ್ಬರು ಕೆಪಿಎಸ್‌ಸಿ ಸದಸ್ಯರಾಗಿ ಮೊದಲ ಬಾರಿಗೆ ನೇಮಕಗೊಂಡಿದ್ದಾರೆ. ಇದು ಪತ್ರಕರ್ತರಿಗೆ ಅಭಿಮಾನದ ಸಂಗತಿಯಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಯುವ ಜನತೆಗೆ ಉದ್ಯೋಗಾವಕಾಶವನ್ನು ಒದಗಿಸುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ದೊರಕಿದೆ. ಅರ್ಹರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಾಜಿ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈ, ಬಿ.ರವೀಂದ್ರ ಶೆಟ್ಟಿ, ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್, ಪತ್ರಿಕಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್, ಹಿರಿಯ ಪತ್ರಕರ್ತರಾದ ಮುಹಮ್ಮದ್ ಆರೀಫ್, ವೇಣುವಿನೋದ್, ಆತ್ಮಭೂಷಣ್ ಭಟ್ ಮತ್ತಿತರರು ಉಪಸ್ಥಿತರಿದ್ದರು.







