ಸಂಸದರಿಗೆ ಐಫೋನ್ ಕೊಟ್ಟ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದೇನು ?

ಬೆಂಗಳೂರು, ಜು.17: ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತ್ವರಿತವಾಗಿ ಮಾಹಿತಿ ಸಿಗಲಿ ಎಂಬ ಸದುದ್ದೇಶದಿಂದ ಐಫೋನ್‌ನ್ನು ನನ್ನ ಸ್ವಂತ ಖರ್ಚಿನಲ್ಲಿ ಕೊಟ್ಟಿದ್ದೇನೆಂದು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.
ಸಂಸದರಿಗೆ ನೀಡಲಾಗಿರುವ ಐಫೋನ್ ಕುರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಪೌರಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ. ಆದರೆ, ಸಂಸದರಿಗೆ ಐಫೋನ್ ಕೊಡಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ. ಸಂಸದರಿಗೆ ಐಫೋನ್ ಕೊಟ್ಟಿರುವುದು ಸರಕಾರದ ಹಣದಿಂದಲ್ಲ. ನನ್ನ ಸ್ವಂತ ಖರ್ಚಿನಿಂದ ಎಂದು ತಿರುಗೇಟು ನೀಡಿದರು.
ಕಳೆದ ವರ್ಷವೂ ಸಂಸದರಿಗೆ ಐಫೋನ್ ಉಡುಗೊರೆ ನೀಡಿದ್ದೆ. ಅದೇ ರೀತಿಯಲ್ಲಿ ಈ ಸಲವು ಎಲ್ಲ ಸಂಸದರಿಗೆ ಐಫೋನ್ ಕಳಿಸಿದ್ದೆ. ಆದರೆ, ರಾಜೀವ್ ಚಂದ್ರಶೇಖರ್ ಸೇರಿದಂತೆ ಕೆಲವು ಸಂಸದರು ಹಣವಂತರಾದ್ದರಿಂದ ಐಫೋನ್ ವಾಪಸ್ ಕಳಿಸಿದ್ದಾರೆ. ಅಗತ್ಯವಿರುವವರು ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲಿದ್ದಾರೆ. ಅದರಲ್ಲಿ ತಪ್ಪುಗಳನ್ನು ಹುಡುಕುವುದು ಸರಿಯಲ್ಲವೆಂದು ಅವರು ತಿಳಿಸಿದರು.





