ಜು.18ರಿಂದ ಶಿರಾಡಿಘಾಟ್‌ನಲ್ಲಿ ಘನ ವಾಹನಗಳ ಸಂಚಾರ ನಿಷೇಧ

ಮಂಗಳೂರು, ಜು.17: ಶಿರಾಡಿಘಾಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡು ರವಿವಾರ ಉದ್ಘಾಟನೆಗೊಂಡು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಈ ರಸ್ತೆಯ ಗಾರ್ಡ್‌ವಾಲ್ ಹಾಗೂ ಶೋಲ್ಡರ್ ನಿರ್ಮಾಣ ಸಹಿತ ಸಣ್ಣಪುಟ್ಟ ಕೆಲಸಗಳು ಬಾಕಿಯಿರುವುರದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲಾಗಿದೆ. ಆದುದರಿಂದ ಜು.18ರಂದು ಬೆಳಗ್ಗೆ 6 ಗಂಟೆಯಿಂದ ಕಾಮಗಾರಿ ಮುಗಿಯುವವರೆಗೆ ಘನ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಈ ರಸ್ತೆಯಲ್ಲಿ ಇದೀಗ ಘನ ವಾಹನಗಳು ಸಂಚರಿಸಿದಲ್ಲಿ ಮಳೆಯಿಂದ ಬಾಕಿಯುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಘನ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಲಘು ವಾಹನಗಳಾದ ಕಾರು, ಜೀಪು, ವ್ಯಾನ್, ಎಲ್ಸಿವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಬಹುದು. ಸಾಮಾನ್ಯ ಬಸ್, ರಾಜಹಂಸ, ಐರಾವತ ಬಸ್, ಖಾಸಗಿ ಲಕ್ಸುರಿ ಬಸ್, ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೋ, ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳನ್ನು ನಿರ್ಬಂಧಿಸಲಾದ ಭಾರಿ ವಾಹನಗಳಾಗಿವೆ ಎಂದು ಪ್ರಕಟನೆ ತಿಳಿಸಿದೆ.





