ಜು.21 ರಂದು ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್‌ಗೆ ಕರೆ
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಆಗ್ರಹ

ಬೆಂಗಳೂರು, ಜು.17: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಂಟಿಯಾಗಿ ಜು.21 ರಂದು ಶಾಲಾ-ಕಾಲೇಜು ಬಂದ್‌ಗೆ ಕರೆ ನೀಡಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟೂಡೆಂಟ್ ಆರ್ಗನೈಸೇಷನ್‌ನ ರಾಷ್ಟ್ರೀಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ರಾಜ್ಯಾದ್ಯಂತ ನಿರಂತರವಾದ ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಹಿಂದಿನ ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಎಲ್ಲರಿಗೂ ಉಚಿತ ಬಸ್‌ಪಾಸ್ ನೀಡುವ ಘೋಷಣೆ ಮಾಡಿತ್ತು. ಆದರೆ, ಅದನ್ನು ಜಾರಿ ಮಾಡುವ ಸಮಯಕ್ಕೆ ಚುನಾವಣೆ ನೀತಿ ಸಂಹಿತೆ ಜಾರಿಯಾದ್ದರಿಂದ ಈಡೇರಲಿಲ್ಲ ಎಂದು ಹೇಳಿದರು. ಅನಂತರ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಸಮ್ಮಿಶ್ರ ಸರಕಾರ ರಚನೆಯಾಗಿದ್ದು, ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚಿಗೆ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಹಿಂದಿನ ಸರಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಬಗ್ಗೆ ಸ್ಪಷ್ಟವಾದ ನಿರ್ಧಾರ ಪ್ರಕಟಿಸಿಲ್ಲ. ಇದರಿಂದಾಗಿ ಎರಡು ತಿಂಗಳಿಂದ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತವಾಗಿದೆ ಎಂದು ತಿಳಿಸಿದರು.
ರೈತರ, ಬಡವರ ಪರ ಎಂದು ಹೇಳಿಕೊಳ್ಳುವ ಸಮ್ಮಿಶ್ರ ಸರಕಾರ ರೈತ ಮತ್ತು ಬಡವರ ಮಕ್ಕಳಿಗೆ ಅನ್ಯಾಯ ಮಾಡಲು ಮುಂದಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರು ಸೇರಿದಂತೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಬಂದ್‌ಗೆ ಕರೆ ನೀಡಿದ್ದು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಕೆ.ಎಸ್.ಅಶ್ವಿನಿ ಮಾತನಾಡಿ, ರಾಜ್ಯ ಸರಕಾರ ಹಾಗೂ ಸಾರಿಗೆ ಇಲಾಖೆಯು ಉಚಿತ ಬಸ್‌ಪಾಸ್ ನೀಡಲು ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ದೊಡ್ಡ ಸುಳ್ಳಾಗಿದೆ. ಅಲ್ಲದೆ, ಹಿಂದಿನ ಸರಕಾರ ನೀಡಿರುವ 860 ಕೋಟಿ ಹಣದಿಂದಲೇ ಉಚಿತ ಬಸ್‌ಪಾಸ್ ನೀಡಲು ಸಾಧ್ಯವಿದೆ. ಹೀಗಿದ್ದರೂ, ಹೆಚ್ಚುವರಿಯಾಗಿ 600 ಕೋಟಿ ಅವಶ್ಯಕತೆಯಿದೆ ಎನ್ನುವುದು ವ್ಯಾಪಾರಿ ಮಾನದಂಡವಾಗಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಪಾಸ್ ಹಣವನ್ನು ಭರಿಸುತ್ತಿದೆ. ಇನ್ನುಳಿದ ವಿದ್ಯಾರ್ಥಿಗಳಿಗಷ್ಟೇ ಸರಕಾರ ವಿಸ್ತರಣೆ ಮಾಡಬೇಕಿದೆ ಎಂದರು.
ಶಿಕ್ಷಣ ನೀಡುವುದು ಸರಕಾರದ ಸಂಪೂರ್ಣ ಜವಾಬ್ದಾರಿ. ಅದೇ ರೀತಿ ಬಸ್‌ಪಾಸ್ ನೀಡುವುದು ಸರಕಾರದ ಕೆಲಸ. ವಿದ್ಯಾರ್ಥಿಗಳು ಬಸ್‌ಪಾಸ್ ಪಡೆಯುವುದು ಶಿಕ್ಷಣ ಹಕ್ಕಿನ ಭಾಗವಾಗಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಯ ರೀತಿಯಲ್ಲಿಯೇ ಸಾರಿಗೆ ಸಂಸ್ಥೆಯು ಸೇವಾ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ವ್ಯಾಪಾರ ಅಥವಾ ಲಾಭದ ದೃಷ್ಟಿಯಲ್ಲಿಟ್ಟುಕೊಂಡು ಬಡ ವಿದ್ಯಾರ್ಥಿಗಳಿಂದ ಪಾಸ್ ಹೆಸರಿನಲ್ಲಿ ಹಣ ಕಿತ್ತುಕೊಳ್ಳುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.







