ಸಮುದ್ರದಲ್ಲೇ ಸಿಮೆಂಟ್ ಜೆಟ್ಟಿ ನಿರ್ಮಾಣ : ಸಚಿವ ವೆಂಕಟರಾವ್ ನಾಡಗೌಡ

ಮಂಗಳೂರು, ಜು.17: ಕಡಲತೀರದಲ್ಲಿ ಜೆಟ್ಟಿ ನಿರ್ಮಾಣ ಸಮಸ್ಯೆಗೆ ಪರಿಹಾರ ಮಾರ್ಗವವಾಗಿ ಸಮುದ್ರದಲ್ಲಿಯೇ ಸಿಮೆಂಟ್‌ನಿಂದ ಜೆಟ್ಟಿ ನಿರ್ಮಾಣ ಮಾಡಲಾಗುವುದು ಎಂದು ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ನಗರದ ಬಂದರ್ ದಕ್ಕೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಮೀನುಗಾರ ಮುಖಂಡರ ಅಹವಾಲು ಆಲಿಸಿ ಅವರು ಮಾತನಾಡಿದರು.
ಕಡಲತೀರದಲ್ಲಿ ಜೆಟ್ಟಿ ನಿರ್ಮಾಣ, ಹೂಳು ತೆಗೆಯುವುದು, ಹಡಗುಗಳ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಈಗಾಗಲೇ ಗೋವಾದಲ್ಲಿ ಸಮುದ್ರದಲ್ಲೇ ಸಿಮೆಂಟ್ ಜೆಟ್ಟಿ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿಯೂ ಇಂತಹದ್ದೇ ಜೆಟ್ಟಿ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸದ್ಯ ಇರುವ ಜೆಟ್ಟಿಯಲ್ಲಿ ಹಡಗುಗಳ ಘರ್ಷಣೆಯಿಂದಾಗಿ ಡ್ಯಾಮೇಜ್ ಆಗುತ್ತಿದೆ. ಸಿಮೆಂಟ್ ಜೆಟ್ಟಿ ನಿರ್ಮಾಣವಾದಲ್ಲಿ ಸಮಸ್ಯೆ ಉದ್ಭವಿಸುವುದಿಲ್ಲ. ಇದರಲ್ಲಿ ಹಡಗುಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ಇರುತ್ತದೆ. ಸಾಮಾನ್ಯ ಜೆಟ್ಟಿ ನಿರ್ಮಾಣಕ್ಕಿಂತ ಕಡಿಮೆ ಖರ್ಚಿನಲ್ಲಿ ನಿರ್ಮಾಣ ಮಾಡಬಹುದಾಗಿದೆ ಎಂದರು.
ಸಿಮೆಂಟ್ ಜೆಟ್ಟಿಯು 50 ವರ್ಷಗಳ ಕಾಲ ಬಾಳಿಕೆ ಬರಲಿದೆ. ಜೆಟ್ಟಿಯಲ್ಲಿ 50 ಟನ್ ಭಾರವನ್ನು ಹೊತ್ತು ಲಾರಿಗಳು ಸಾಗಬಹುದು. ಇಲ್ಲಿ ಹೂಳು ತೆಗೆಯುವ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸುಲಭವಾಗಿ ಮೀನನ್ನು ಸಾಗಾಟ ಮಾಡಬಹುದು. ಹಲವಾರು ಸೌಲಭ್ಯಗಳನ್ನು ಇದರ ಮೂಲಕ ಪಡೆದು ಕೊಳ್ಳಬಹುದಾಗಿದೆ. ಜೆಟ್ಟಿ ನಿರ್ಮಾಣದ ಕುರಿತು ಈಗಾಗಲೇ ಪ್ರದರ್ಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಈ ಯೋಜನೆ ಲಾಭದಾಯಕವಾಗಲಿದೆ ಎಂದು ತಿಳಿಸಿದರು.
3ನೇ ಹಂತದ ಬಂದರಿನ ವಿಸ್ತರಣೆಗೆ ಬದ್ಧ: ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ವಿಸ್ತರಣೆಯ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಹೆಚ್ಚುವರಿ ಅನುದಾನ ಅಗತ್ಯವಿದ್ದು, ಇದಕ್ಕೆ ಅನುಮತಿ ನೀಡಲಾಗುವುದು. ಈ ಯೋಜನೆಗೆ ರಾಜ್ಯ ಸರಕಾರದ ಅನುದಾನ ಬಿಡುಗಡೆಯಾಗಿದ್ದು, ಕೇಂದ್ರ ಸರಕಾರದ ಪಾಲಿನ ಅನುದಾನ ಬಿಡುಗಡೆಯಾಗುವ ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದರು. 3ನೇ ಹಂತದ ಬಂದರಿನ ವಿಸ್ತರಣೆಗೆ ಇನ್ನಷ್ಟು ಭೂಮಿ ಅಗತ್ಯ ಇರುವ ಬಗ್ಗೆ ಮೀನುಗಾರ ಮುಖಂಡರು ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
ಮೀನುಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ದ.ಕ. ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಒಟ್ಟು 43 ಸಿಬ್ಬಂದಿ ಅಗತ್ಯವಿದೆ. ಸದ್ಯ 16 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 27 ಸಿಬ್ಬಂದಿಯ ನೇಮಕವಾಗಬೇಕು. ನೇಮಕಾತಿಯಲ್ಲಿ ಮೂಲ ಮೀನುಗಾರರ ಯುವಕರನ್ನೇ ಆಯ್ದುಕೊಳ್ಳಬೇಕು ಎಂದು ಮೀನುಗಾರರ ಸಂಘಟನೆಯ ಮುಖಂಡರೊಬ್ಬರು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಇಲಾಖೆಗಳಲ್ಲಿಯೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಅದರಂತೆ ಮೀನುಗಾರಿಕೆ ಇಲಾಖೆಯಲ್ಲಿ ಹಂತಹಂತವಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯದ ರೈತರ ಸಾಲವನ್ನು ಮಾಡದಂತೆಯೇ ಮೀನುಗಾರರ ಸಾಲವನ್ನೂ ಮನ್ನಾ ಮಾಡುವಂತೆ ಮತ್ತೋರ್ವ ಮೀನುಗಾರ ಮುಖಂಡರು ಸಚಿವರಲ್ಲಿ ಒತ್ತಾಯಿಸಿದರು.
ಇದಕ್ಕೆ ಉತ್ತಿರಿಸಿದ ಸಚಿವರು, ಅನುದಾನದ ಕ್ರೋಡೀಕರಣದ ಸಮಸ್ಯೆಯಿದೆ. ಜು.20ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಸಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪಗೌಡ, ಮೀನುಗಾರಿಕಾ ಉಪನಿರ್ದೇಶಕ ಮಹೇಶ್‌ಕುಮಾರ್, ಕೆಎಫ್‌ಡಿಸಿಯ ವ್ಯವಸ್ಥಾಪಕ ಎಂ.ಎಲ್.ದೊಡ್ಡಮನಿ, ಬಂದರ ಮತ್ತು ಮೀನುಗಾರಿಕೆಯ ಇಂಜಿನಿಯರ್ ನಾಗರಾಜ, ಮೀನುಗಾರ ಮುಖಂಡರಾದ ಮನೋಹರ್ ಬೋಳೂರು, ಮೋಹನ್ ಬೆಂಗ್ರೆ, ನಿತಿನ್‌ಕುಮಾರ್, ರತ್ನಾಕರ ಸುವರ್ಣ, ವಿವಿಧ ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಚಿವರು ಮೀನುಗಾರಿಕಾ ಬಂದರಿನ ಎಲ್ಲ ಘಟಕಗಳಿಗೆ, ಜೆಟ್ಟಿ ಸ್ಥಾವರ, ಮಂಜುಗಡ್ಡೆ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮಲ್ಪೆಯಲ್ಲಿ ಬ್ಯಾಟರಿಚಾಲಿತಯಂತ್ರ ಪ್ರಾಯೋಗಿಕ ಅಳವಡಿಕೆ
ಬೋಟುಗಳಿಗೆ ಸೀಮೆಎಣ್ಣೆ ಬಳಸಿಕೊಂಡು ಮೀನುಗಾರಿಕೆ ಮಾಡುವುದು ಹಳೆಯ ಪದ್ಧತಿಯಾಗಿದೆ. ಹೀಗಾಗಿ ಜು.18ರಂದು ಮಲ್ಪೆಯಲ್ಲಿ ದೋಣಿಗಳಿಗೆ ಬ್ಯಾಟರಿಚಾಲಿತಯಂತ್ರಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುವುದು ಎಂದು ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಬ್ಯಾಟರಿ ಚಾಲಿತಯಂತ್ರವನ್ನು ಸಣ್ಣ ಬೋಟುಗಳಿಗೆ 18 ಗಂಟೆಗಳ ಕಾಲ ಬಳಸಬಹುದಾಗಿದೆ. ಇದು ಯಶಸ್ವಿಯಾದರೆ ಮೀನುಗಾರರ ಅರ್ಧ ಸಮಸ್ಯೆಯೇ ಬಗೆಹರಿದಂತಾಗುತ್ತದೆ. ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ಪೂರೈಕೆಯನ್ನು ಕೇಂದ್ರ ಸರಕಾರ ಕಡಿಮೆಗೊಳಿಸಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿಗಳು ಸೀಮೆಎಣ್ಣೆಗೆ ಪರ್ಯಾಯವಾದ ಇಂಧನದತ್ತ ಗಮನಹರಿಸಬೇಕು ಎಂದು ಸಚಿವರು ನುಡಿದರು.
‘ಮೀನುಗಾರಿಕೆ ಡೀಸೆಲ್ ಸಬ್ಸಿಡಿ ಶೀಘ್ರ ಪಾವತಿ’
ಮೀನುಗಾರಿಕಾ ಬೋಟುಗಳಿಗೆ ನೀಡಬೇಕಾದ ಬಾಕಿ ಡೀಸೆಲ್ ಸಬ್ಸಿಡಿಯನ್ನು ಮುಂದಿನ ಒಂದು ವಾರದೊಳಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಬಾಕಿ ಡೀಸೆಲ್ ಸಬ್ಸಿಡಿ ಕುರಿತು ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಬಾಕಿ ಬಿಡುಗಡೆ ಮಾಡಲಾಗುವುದು. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರಕಾರವು ಗಂಭೀರವಾಗಿ ಚಿಂತಿಸಲಿದೆ ಎಂದು ಸಚಿವ ನಾಡಗೌಡ ತಿಳಿಸಿದರು.
ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘ ಮನವಿ
ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ 12 ತಿಂಗಳೂ ನೀಡಬೇಕು. ಅಲ್ಲದೆ, ಗಿಲ್‌ನೆಟ್ ಬೋಟುಗಳನ್ನು ನಿಲ್ಲಿಸಲು ಪ್ರತ್ಯೇಕ ಜೆಟ್ಟಿ ನಿರ್ಮಿಸಬೇಕು ಎಂದು ಸಚಿವರಿಗೆ ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವ ವೆಂಕಟರಾವ್ ನಾಡಗೌಡ, ಮೀನುಗಾರರ ಸಮಸ್ಯೆಗಳೇನು ಎನ್ನುವುದು ತನಗೆ ಅರಿವಿದೆ/ ಕೇಂದ್ರ ಸರಕಾರ ಸೀಮೆಎಣ್ಣೆ ಕಡಿತಗೊಳಿಸಿದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಹೊಸ ಪ್ರಯೋಗಗಳ ಮೂಲಕ ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸಲಾಗುವುದು ಎಂದರು







