ಕದ್ರಿ ಉದ್ಯಾನ ಅಭಿವೃದ್ಧಿ ಸಲಹಾ ಸೂಚನೆ ಸಮಿತಿ ಸಭೆ: ‘ಕದ್ರಿ ಉದ್ಯಾನದಲ್ಲಿ 6 ತಿಂಗಳಲ್ಲಿ ಜಿಮ್ ವ್ಯವಸ್ಥೆ’

ಮಂಗಳೂರು, ಜು.17: ಕರಾವಳಿ ನಗರ, ಸ್ಮಾರ್ಟ್‌ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಜನಪ್ರಿಯ ಉದ್ಯಾನವಾದ ಕದ್ರಿ ಉದ್ಯಾನದಲ್ಲಿ ಮುಂದಿನ ಆರು ತಿಂಗಳುಗಳೊಳಗೆ ವಿಹಾರಿಗಳಿಗೆ ಜಿಮ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ದ.ಕ. ಜಿಲ್ಲೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಚ್.ಆರ್. ನಾಯಕ್ ತಿಳಿಸಿದ್ದಾರೆ.
ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಕದ್ರಿ ಉದ್ಯಾನ ಅಭಿವೃದ್ಧಿ ಸಲಹಾ ಸೂಚನೆ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಸಲಹೆ-ಸೂಚನೆ ಮೇರೆಗೆ ಜಿಮ್ ವ್ಯವಸ್ಥೆ ಕಲ್ಪಿಸುವುದಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದರು.
ಜಿಮ್ ವ್ಯವಸ್ಥೆಯನ್ನು ಕಲ್ಪಿಸಲು ಪೇಯಿಂಗ್ ವ್ಯವಸ್ಥೆ ಮೂಲಕ ನಿರ್ವಹಣೆ ಮಾಡಲು ಜಿಲ್ಲಾಧಿಕಾರಿ ಸಭೆಯಲ್ಲಿ ಚರ್ಚಿಸಲಾಗುವುದು. ಈಗಾಗಲೇ ಮುಂಬೈ, ಬೆಂಗಳೂರುಗಳಂತಹ ಮಹಾನಗರಗಳ ಉದ್ಯಾನಗಳಲ್ಲಿ ಜಿಮ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದರಂತೆ ನಗರದ ಉದ್ಯಾನದಲ್ಲಿ ಜಿಮ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಉದ್ಯಾನದಲ್ಲಿ ಸಿಸಿಟಿವಿಗಳನ್ನು ಅಳವಡಿಕೆ ಮಾಡಲು ಕ್ರಮ ವಹಿಸಲಾಗುವುದು. ಉದ್ಯಾನದಲ್ಲಿ ವಾಕಿಂಗ್ ಮಾಡಲು ಮಾರ್ಗದ ಸೂಚನಾಫಲಕಗಳನ್ನು ಅಳವಡಿಸಲಾಗುವುದು. ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿ ರಚನೆ: ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿಯನ್ನು ಒಂದು- ಎರಡು ತಿಂಗಳಲ್ಲಿ ರಚನೆ ಮಾಡಲಾಗುವುದು. ಇದರಿಂದ ಕದ್ರಿ ಉದ್ಯಾನವನ್ನು ಇನ್ನು ಆಕರ್ಷಣಿಯಗೊಳಿಸಲು ಸಾಧ್ಯವಾಗಲಿದೆ. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಲಿದ್ದು, ಜಿಪಂ ಸಿಇಒ ಉಪಾಧ್ಯಕ್ಷ ರಾಗಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮನಪಾ ಆಯುಕ್ತ, ಮುಡಾ ಆಯುಕ್ತ, ಈ ಭಾಗದ ಶಾಸಕ, ಜನಪ್ರತಿನಿಧಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಇಬ್ಬರು ಸಾರ್ವಜನಿಕರು ಸಮಿತಿಯ ಸದಸ್ಯರಾಗಲು ಅವಕಾಶವಿದೆ ಎಂದು ದ.ಕ. ಜಿಲ್ಲೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಚ್.ಆರ್. ನಾಯಕ್ ತಿಳಿಸಿದರು.
ಈ ಸಮಿತಿಯು ಕದ್ರಿ ಉದ್ಯಾನ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ-ಸೂಚನೆ, ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಿದೆ. ಸ್ಮಾರ್ಟ್‌ಸಿಟಿಗೆ ಉದ್ಯಾನಗಳ ಕೊಡುಗೆ ಹೆಚ್ಚು ಇರುತ್ತದೆ. ಈ ಹಿನ್ನೆಲೆಯಲ್ಲಿ ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿಯನ್ನು ಮುಂದಿನ ತಿಂಗಳಲ್ಲಿ ರಚಿಸಲಾವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಜಾನಕಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಪ್ರದೀಪ್ ಡಿಸೋಜ, ಮಕ್ಕಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸುಂದರ್ ಪೂಜಾರಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಎಚ್.ಕೆ. ಪ್ರವೀಣ್, ಎಇಇ ಇಂಜಿನಿಯರ್, ಜಿ.ಕೆ.ಭಟ್ ಮತ್ತಿತರರು ಉಪಸ್ಥಿತರಿದ್ದರು.







