ಕಾರ್ಕಳದ ಒಂಟಿ ಮಹಿಳೆಯ ಕೊಲೆ ಪ್ರಕರಣ: ಮುಂಬೈಯಲ್ಲಿ ಆರೋಪಿ ಸೆರೆ

ಕಾರ್ಕಳ, ಜು. 17: ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ನಿವಾಸಿ ಫ್ಲೋರಿನ್ ಮಚಾದೋ ಎಂಬ ಒಂಟಿ ಮಹಿಳೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಮುಂಬೈನ ಪನ್ವೇಲ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕಾರ್ಕಳ ಈದು ಗ್ರಾಮದ ಹೊಸ್ಮಾರು ನಿವಾಸಿ ಮುಹಮ್ಮದ್ ರಿಯಾಝ್ (33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನಲೆ:
ರಿಯಾಝ್ ಈ ಹಿಂದೆ ದುಬೈನಲ್ಲಿದ್ದು ಪಾಸ್‌ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ 5 ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಈತನಿಗೆ ಫ್ಲೋರಿನ್ ಮಚಾದೋ ಪರಿಚಯವಾಗಿದ್ದು ಬಳಿಕ ಇವರಿಬ್ಬರ ಪರಿಚಯ ಸ್ನೇಹವಾಗಿ ಆತ್ಮೀಯವಾಗಿದ್ದರು. ಇವರಿಬ್ಬರ ಆತ್ಮೀಯತೆ ಮುಂದುವರಿದು ಹಣಕಾಸಿನ ವ್ಯವಹಾರದವರೆಗೆ ಮುಂದುವರಿಯಿತು.
ಆರಂಭದಲ್ಲಿ ಫ್ಲೋರಿನ್ ರಿಯಾಝ್ ನಿಂದ ಒಂದಷ್ಟು ಸಾಲ ಪಡೆದಿದ್ದು, ಬಳಿಕ ಅದನ್ನು ಮರುಪಾವತಿಸಿ ನಂತರ ಆಗಾಗ ಸಾಲ ಪಡೆದು ಪ್ರಸ್ತುತ ಸುಮಾರು 13 ಲಕ್ಷ ರೂ. ಸಾಲ ಬಾಕಿಯಿರಿಸಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ. ಈತನಿಂದ ಪಡೆದ ಸಾಲವನ್ನು ಫ್ಲೋರಿನ್ ಬಡ್ಡಿಗಾಗಿ ನೀಡುತ್ತಿದ್ದರು. ಆದರೆ ರಿಯಾಝ್ ನೀಡಿದ್ದ ಭಾರೀ ಮೊತ್ತದ ಸಾಲವನ್ನು ಫ್ಲೋರಿನ್ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಈ ಹಿಂದೆ ಸಾಕಷ್ಟು ಬಾರಿ ಜಗಳ ನಡೆದಿತ್ತು. ಕೊಲೆಯಾಗುವ ಮುನ್ನ ದಿನ ಆತ ಫ್ಲೋರಿನ್ ಮನೆಗೆ ಬಂದು ಸಾಲದ ಹಣ ಕೊಡುವಂತೆ ಜಗಳವಾಡಿದ್ದ, ಬಳಿಕ ಶನಿವಾರ ರಾತ್ರಿ ಆತ ಮತ್ತೆ ಫ್ಲೋರಿನ್ ಮನೆಗೆ ಬಂದು ಈ ಬಾರಿ ಹಣ ವಸೂಲಿ ಮಾಡಬೇಕು, ಇಲ್ಲವಾದಲ್ಲಿ ಆಕೆಯನ್ನು ಕೊಲೆಗೈಯಬೇಕೆಂದು ಚಾಕುವಿನೊಂದಿಗೆ ಮನೆಗೆ ಬಂದಿದ್ದ. ಮುಂಜಾನೆ 5 ಗಂಟೆಯ ವೇಳೆಗೆ ಹಣದ ವಿಷಯದಲ್ಲಿ ಇವರಿಬ್ಬರಿಗೆ ಜಗಳ ನಡೆದು ಈ ಜಗಳ ವಿಕೋಪಕ್ಕೆ ತೆರಳಿ ಆತ ತಂದಿದ್ದ ಚಾಕುವಿನಲ್ಲಿ ಇರಿದು ಹತ್ಯೆ ಮಾಡಿದ್ದ. ಇದಾದ ನಂತರ ಬೆಳಗ್ಗೆ 11 ಗಂಟೆಯವರೆಗೂ ರಿಯಾಝ್ ಆಕೆಯ ಮನೆಯಲ್ಲಿದ್ದು ಅಲ್ಲಿಂದ ಆಕೆಯ ಚಿನ್ನಾಭರಣ, ನಗದು, ಮೊಬೈಲ್ ಹಾಗೂ ಸ್ಕೂಟರ್ ಎಗರಿಸಿ ಪರಾರಿಯಾಗಿದ್ದ. ಇತ್ತ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪಿಗಾಗಿ ಶೋಧ ನಡೆಸಿ ಬಂಧಿಸಿದ್ದಾರೆ.
ಫ್ಲೋರಿನ್ ರನ್ನು ಕೊಲೆಗೈದ ರಿಯಾಝ್ ಬಳಿಕ ಆಕೆಯ ಸ್ಕೂಟರ್ ಅನ್ನು ಹಿರಿಯಡ್ಕದಲ್ಲಿ ಬಿಟ್ಟು ಅಲ್ಲಿಂದ ಬಸ್ ಮೂಲಕ ಪರಾರಿಯಾಗಿದ್ದ. ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಆತ ಅಜ್ಮೀರ್‌ನಲ್ಲಿರುವುದು ಪತ್ತೆಯಾಗಿತ್ತು. ಬಳಿಕ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ರೈಲ್ವೇ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದಾಗ ಆತ ಅಹ್ಮದಬಾದ್ ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ರಿಯಾಝ್ ಪ್ರಸ್ತುತ ತನ್ನ ಪತ್ನಿಯೊಂದಿಗೆ ಮಂಗಳೂರಿನ ಉಳ್ಳಾಲದಲ್ಲಿ ವಾಸವಿದ್ದು, ಪೊಲೀಸರು ಈತನಿಂದ ಹತ್ಯೆಗೆ ಬಳಸಲಾಗಿರುವ ಚಾಕು ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದು, ಮಂಗಳವಾರ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತನಿ ರೀಕ್ಷಕ ಜೋಯ್ ನೇತೃತ್ವದ ತಂಡದಲ್ಲಿ ಅಜೆಕಾರು ಪಿಎಸ್‌ಐ ರೋಜಾರಿಯೋ ಡಿಸೋಜಾ, ಹೆಡ್‌ಕಾನ್‌ಸ್ಟೇಬಲ್‌ಗಳಾದ ರಾಮು ಹೆಗ್ಡೆ, ರಾಜೇಶ್, ಪ್ರಕಾಶ್ ಹಾಗೂ ನಗರ ಠಾಣೆಯ ಪಿಸಿ ರಾಘವೇಂದ್ರ ಮತ್ತು ಡಿಸಿಐಬಿ ಪೊಲೀಸರು ಸಹಕರಿಸಿದ್ದಾರೆ.







