ನಮಗೆ ಬೇಕಾಗಿರುವುದು ಚರ್ಚೆ, ಕಲಾಪ ವ್ಯತ್ಯಯವಲ್ಲ: ಪ್ರತಿಪಕ್ಷ

ಹೊಸದಿಲ್ಲಿ, ಜು.17: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಮಂಗಳವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷಗಳು,ತಮಗೆ ಚರ್ಚೆ ನಡೆಯುವುದು ಬೇಕಾಗಿದೆಯೇ ಹೊರತು ಕಲಾಪ ವ್ಯತ್ಯಯವಲ್ಲ ಮತ್ತು ಸದನದ ಮುಂದೂಡಿಕೆಯನ್ನೂ ತಾವು ಬಯಸಿಲ್ಲ ಎಂದು ಹೇಳಿದವು. ಬಹಳಷ್ಟು ಮಸೂದೆಗಳ ಮೇಲೆ ಚರ್ಚೆ ನಡೆಯಬೇಕಿದ್ದರೂ ಅಧಿವೇಶನಕ್ಕೆ ಕೇವಲ 18 ದಿನಗಳನ್ನು ನಿಗದಿಗೊಳಿಸಿರುವುದನ್ನು ಅವು ಪ್ರಶ್ನಿಸಿದವು. ಮುಂಗಾರು ಅಧಿವೇಶನವು ಜು.18ರಿಂದ ಆ.10ರವರೆಗೆ ನಡೆಯಲಿದೆ.
ಈ ಅಧಿವೇಶನದಲ್ಲಿ ಅಂಗೀಕಾರಕ್ಕಾಗಿ 18 ಮಸೂದೆಗಳು ಕಾಯುತ್ತಿದ್ದು,ತ್ರಿವಳಿ ತಲಾಕ್ ಮಸೂದೆಯು ಆದ್ಯತೆಯಲ್ಲಿದೆ. ಈ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದ್ದು,ರಾಜ್ಯಸಭೆಯು ಇನ್ನಷ್ಟೇ ಅಂಗೀಕರಿಸಬೇಕಿದೆ. ಅಧಿವೇಶನದ ಅವಧಿಯಲ್ಲಿ ರಾಜ್ಯಸಭೆಯ ಉಪಸಭಾಪತಿಗಳ ಚುನಾವಣೆಯೂ ನಡೆಯುವ ನಿರೀಕ್ಷೆಯಿದೆ.
ಸದನದಲ್ಲಿ ಎಲ್ಲ ವಿಷಯಗಳೂ ಚರ್ಚೆಯಾಗಬೇಕೆಂದು ನಾವು ಬಯಸಿದ್ದೇವೆ ಎಂದು ಪ್ರಧಾನಿಯನ್ನು ಉಲ್ಲೇಖಿಸಿ ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ವಿಜಯ ಗೋಯೆಲ್ ಅವರು ತಿಳಿಸಿದರು. ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಸರಕಾರವು ಬಯಸಿದೆ ಎಂದೂ ಅವರು ಹೇಳಿದರು.
ಗೃಹಸಚಿವ ರಾಜನಾಥ ಸಿಂಗ್,ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್,ಗೋಯೆಲ್,ಕಾಂಗ್ರೆಸ್ ನಾಯಕರಾದ ಆನಂದ ಶರ್ಮಾ ಮತ್ತು ಗುಲಾಂ ನಬಿ ಆಝಾದ್,ಎನ್‌ಸಿಪಿ ನಾಯಕ ಶರದ ಪವಾರ್ ಮತ್ತು ಸಿಪಿಐ ನಾಯಕ ಡಿ.ರಾಜಾ ಅವರೂ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.
ಸೋಮವಾರ ತಮ್ಮ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 14 ಪ್ರತಿಪಕ್ಷಗಳು ಸಭೆ ಸೇರಿದ್ದವು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು,ಸಂಸತ್ತು ಸುಗಮವಾಗಿ ಕಾರ್ಯ ನಿರ್ವಹಿಸಬೇಕು ಎನ್ನುವ ಸರ್ವಸರ್ಮತ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಇಷ್ಟಾದ ನಂತರವೂ ಕಲಾಪಕ್ಕೆ ವ್ಯತ್ಯಯವುಂಟಾದರೆ ಅದಕ್ಕೆ ಸರಕಾರವೇ ಹೊಣೆಯಾಗಿರುತ್ತದೆಯೇ ಹೊರತು ಪ್ರತಿಪಕ್ಷವಲ್ಲ ಎಂದು ತಿಳಿಸಿದ್ದರು.







