ಪ್ರಶಸ್ತಿ ಮೊತ್ತ ದುಡಿಯುವ ಸಂಸ್ಥೆಗೆ ನೀಡಿದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ

ಉಡುಪಿ, ಜು.17: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಇತ್ತೀಚೆಗೆ ಪ್ರದಾನ ಮಾಡಲಾದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾರಂಗ ಪ್ರಶಸ್ತಿಯ ಮೊತ್ತವನ್ನು ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ತಾನು ದುಡಿಯುವ ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ದೇಣಿಗೆಯಾಗಿ ನೀಡಿದರು.
ಪ್ರಶಸ್ತಿ ಮೊತ್ತ 40ಸಾವಿರ ರೂ. ಸೇರಿದಂತೆ ಒಟ್ಟು 50ಸಾವಿರ ರೂ. ದೇಣಿಗೆ ಯನ್ನು ಸಂಜೀವ ಸುವರ್ಣ ಮಂಗಳವಾರ ಯಕ್ಷಗಾನ ಕೇಂದ್ರದಲ್ಲಿ ಕೇಂದ್ರದ ನಿರ್ದೇಶಕ ವರದೇಶ್ ಹಿರೇಗಂಗೆ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ದಲ್ಲಿ ವೇದಾ ಸಂಜೀವ ಸುವರ್ಣ, ಜರ್ಮನಿಯ ಸಂಶೋಧಕಿ ಕ್ಯಾಥರಿನ್ ಬೈಂದಾರ್ ಉಪಸ್ಥಿತರಿದ್ದರು.
‘ನನಗೆ ಸಿಕ್ಕಿದ ಎಲ್ಲ ಪ್ರಶಸ್ತಿ ಹಾಗೂ ಪ್ರದರ್ಶನದಲ್ಲಿ ಬಂದ ಹಣವನ್ನು ನನ್ನನ್ನು ಸಾಕಿ ಇಷ್ಟು ಎತ್ತರಕ್ಕೆ ಬೆಳೆಸಿದ ಸಂಸ್ಥೆಗೆ ಅರ್ಪಿಸಿದ್ದೇನೆ. ಇದು ಎಲ್ಲ ಸೌಲಭ್ಯ ಗಳಿಂದ ವಂಚಿತರಾಗಿರುವ ಈ ಸಂಸ್ಥೆಯಲ್ಲಿ ಕಲಿಯುವ 60 ಬಡ ವಿದ್ಯಾರ್ಥಿ ಗಳ ಊಟ ಉಪಚಾರಕ್ಕೆ ವಿನಿಯೋಗ ಆಗಬೇಕು’ ಎಂದು ಗುರು ಸಂಜೀವ ಸುವರ್ಣ ತಿಳಿಸಿದರು.
ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಗುರು ಸಂಜೀವ ಸುವರ್ಣ ಅದ್ಭುತ ಕಲಾವಿದ. ತನಗೆ ದೊರೆತ ಪ್ರಶಸ್ತಿ ಮೊತ್ತವನ್ನು ತಾನು ದುಡಿಯುವ ಸಂಸ್ಥೆಗೆ ನೀಡುವ ಮೂಲಕ ನಿಜವಾದ ಸುವರ್ಣ ಅಂದರೆ ಬಂಗಾರದ ಮನುಷ್ಯ ಎನಿಸಿ ಕೊಂಡಿದ್ದಾರೆ. ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಸಿಕ್ಕಿದ ಒಂದು ಲಕ್ಷ ರೂ. ಹಣವನ್ನು ಕೂಡ ಅವರು ಸಂಸ್ಥೆಗೆ ನೀಡಿದ್ದಾರೆ ಎಂದು ಹೇಳಿದರು.







