ಹಂದಿ ಜೋಗಿ ಕುಟುಂಬಗಳ ಎತ್ತಂಗಡಿ ಬೇಡ: ಕರ್ನಾಟಕ ಜನಾಂದೋಲನ ಸಂಘಟನೆ ಒತ್ತಾಯ
ಬೆಂಗಳೂರು, ಜು.17: ಬೆಂಗಳೂರು ದಕ್ಷಿಣ ತಾಲೂಕು ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ.90ರ ಸರಕಾರಿ ಭೂಮಿಯಲ್ಲಿ ಕಳೆದ 10ವರ್ಷಗಳಿಂದ ವಾಸಿಸುತ್ತಿರುವ ಹಂದಿ ಜೋಗಿ ಅಲೆಮಾರಿ ಕುಟುಂಬಗಳಿಗೆ ಬಿಡಿಎ ಅಧಿಕಾರಿಗಳು ಕಿರುಕುಳ ನೀಡಿ, ಎತ್ತಂಗಡಿ ಮಾಡಿಸಲು ಪ್ರಯತ್ನಿಸುತ್ತಿವೆ. ಆ ಮೂಲಕ ಜನತೆಯ ಬದುಕುವ ಹಕ್ಕನ್ನು ಸರಕಾರಿ ಅಧಿಕಾರಿಗಳೆ ಕಸಿಯುತ್ತಿದ್ದಾರೆ ಎಂದು ಕರ್ನಾಟಕ ಜನಾಂದೋಲನ ಸಂಘಟನೆ ಆರೋಪಿಸಿದೆ.
ಸಾಮಾನ್ಯವಾಗಿ ಅಲೆಮಾರಿ ಜೀವನ ನಡೆಸುವ ಹಂದಿ ಜೋಗಿ ಕುಟಂಬಗಳು, ಹೊಸಕೆರೆಹಳ್ಳಿಯಲ್ಲಿ ಕಳೆದ 10ವರ್ಷಗಳಿಂದ ಒಂದೆ ಕಡೆ ನೆಲೆ ನಿಂತಿರುವುದು ಸರಕಾರಿ ಅಧಿಕಾರಿಗಳಿಗೆ ಸಂತೋಷದ ಸಂಗತಿಯಾಗಬೇಕಿತ್ತು. ಹಾಗೂ ಆ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ತಮ್ಮ ಕರ್ತವ್ಯಪ್ರಜ್ಞೆಯನ್ನು ಮೆರೆಯಬೇಕಾಗಿತ್ತು. ಆದರೆ, ಆ ಅಧಿಕಾರಿಗಳೆ ಅವರಿಗೆ ಕಿರುಕುಳ ನೀಡುವ ಮೂಲಕ ಎತ್ತಂಗಡಿ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇವತ್ತಿನ ಆಧುನಿಕ ಜೀವನದಲ್ಲೂ ಅಲೆಮಾರಿ ಸಮುದಾಯ ಹಂದಿ ಜೋಗಿಗಳು ಸ್ವಂತಕ್ಕೊಂದು ಸಣ್ಣ ಮನೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಕೂಡಲೆ ಅವರಿಗೆ ಮನೆಕಟ್ಟಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದ ಬಿಡಿಎ ಅಧಿಕಾರಿಗಳು ಕಿರುಕುಳ ನೀಡುವುದು ಸರಿಯಲ್ಲ. ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಹಂದಿ ಜೋಗಿ ಕುಟುಂಬಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದರೆ, ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಕೂಡಲೆ ಆ ಸಮುದಾಯಕ್ಕೆ ಬಿಡಿಎ ವತಿಯಿಂದಲೆ ಸ್ವಂತ ಮನೆಯನ್ನು ಕಟ್ಟಿಕೊಡಬೇಕು. ಅಲ್ಲಿಯವರೆಗೂ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಹಂದಿ ಜೋಗಿ ಮಕ್ಕಳಿಗೆ ಸರಕಾರಿ ಶಾಲೆಗಳ ದಾಖಲಾತಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಆಧಾರ್ ಗುರುತಿನ ಚೀಟಿ ಇಲ್ಲವೆಂದು ನೆಪವೊಡ್ಡಿ ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಶಾಲೆಯ ದಾಖಲಾತಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ಶಾಲೆಯ ಮುಖ್ಯಸ್ಥರು ಇದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರ ಬಗೆಗೂ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.







