ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಪ್ರಮುಖ ಸಾಕ್ಷಿ ಗಿರೀಶ್, ಗುಲಾಬಿ ಶೆಡ್ತಿಯ ಅಡ್ಡ ವಿಚಾರಣೆ

ಭಾಸ್ಕರ್ ಶೆಟ್ಟಿ
ಉಡುಪಿ, ಜು.16: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ದೂರುದಾರರಾದ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿ ಹಾಗೂ ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಎಸ್.ವಿ.ಗಿರೀಶ್ ಅವರ ಅಡ್ಡ ವಿಚಾರಣೆಯು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನಡೆಯಿತು.
ಗುಲಾಬಿ ಶೆಡ್ತಿಯ ಮುಖ್ಯ ವಿಚಾರಣೆಯನ್ನು ಜು. 2ರಂದು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಹಾಗೂ ಗಿರೀಶ್ ಅವರ ಮುಖ್ಯ ವಿಚಾರಣೆ ಯನ್ನು ಜು.6 ಹಾಗೂ ಜು.16ರಂದು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ನಡೆಸಿದ್ದರು. ಇಂದು ಅವರಿಬ್ಬರ ಅಡ್ಡ ವಿಚಾರಣೆಯನ್ನು ಆರೋಪಿಗಳ ಪರ ವಕೀಲರಾದ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ನಡೆಸಿದರು.
ಈಗಾಗಲೇ ಸಮನ್ಸ್ ಜಾರಿ ಮಾಡಲಾದ 8-10 ಮಂದಿ ಇತರ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಜು.18ರಂದು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನ ಜೈಲಿನಲ್ಲಿದ್ದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಇಂದು ಕೂಡ ಪೊಲೀಸರು ಬಿಗಿ ಭದ್ರತೆಯಲ್ಲಿ ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ಮುಗಿದ ಬಳಿಕ ಸಂಜೆ ವೇಳೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಮಂಗಳೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಸಾಕ್ಷಿ ನಾಶ ಆರೋಪಿಗಳಾದ ಶ್ರೀನಿವಾಸ ಭಭ್ ಹಾಗೂ ರಾಘವೇಂದ್ರ ಹಾಜರಿದ್ದರು.
ಇಂದು ಕೂಡ ವಿಚಾರಣೆಯ ಸಂದರ್ಭ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದೊಳಗೆ ವಕೀಲರನ್ನು ಹೊರತು ಪಡಿಸಿ ಯಾರಿಗೂ ಪ್ರವೇಶ ಇರಲಿಲ್ಲ. ಕೋರ್ಟ್ನ ಒಳಗೆ ಮತ್ತು ಹೊರಗಡೆ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಗಳ ಭದ್ರತೆಯನ್ನು ಮುಂದುವರೆಸಲಾಗಿತ್ತು.







