ರೈತರಿಗೆ ಋಣಮುಕ್ತ ಪತ್ರಕೊಡಿಸಿ, ಹೊಸಸಾಲಕ್ಕೆ ಕ್ರಮ ಕೈಗೊಳ್ಳಿ: ಬಿಜೆಪಿ ರೈತ ಮೋರ್ಚಾ ಆಗ್ರಹ

ತುಮಕೂರು,ಜು.17: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡಿ ಬ್ಯಾಂಕುಗಳಿಗೆ ಸಾಲದ ಹಣವನ್ನು ಪಾವತಿ ಮಾಡುವ ಮೂಲಕ ರೈತರಿಗೆ ಸಾಲದ ಋಣಮುಕ್ತ ಪತ್ರ ಕೊಡಿಸಿ ಮತ್ತೆ ರೈತರಿಗೆ ಹೊಸ ಸಾಲ ಸಿಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಂಗಾರು ಆರಂಭಗೊಂಡು ರಾಜ್ಯದಲ್ಲಿ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತಿದೆ. ರಾಜ್ಯದಲ್ಲಿ ಅನೇಕ ಕಡೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಚುನಾವಣೆಗೂ ಮುನ್ನ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ರೈತರಿಗೆ ನೀಡಿದ ಭರವಸೆಯಂತೆ ಸಾಲಮನ್ನಾ, ಅವರಿಗೆ ನಂಬಿಕೆ ಇಲ್ಲದೆ ದ್ವಂದ್ವ ಹೇಳಿಕೆ ನೀಡುವ ಮೂಲಕ ರೈತರು ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದು, ರೈತರಿಗೆ ಸಾಲಮನ್ನಾ ವಿಶ್ವಾಸ ತಂದಿತ್ತು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೊದಲು 53 ಸಾವಿರ ಕೋಟಿ, ಆ ನಂತರ ಬೆಳೆಸಾಲ ಮನ್ನಾ ಎಂದು ಹೇಳುತ್ತಾ ರೈತರ 34 ಸಾವಿರ ಕೋಟಿ ರೂ. ಎಂದು ಹೇಳಿ ಈಗ 29 ಸಾವಿರ ಕೋಟಿ ರೂ. ಮನ್ನಾ ಮಾಡಲಾಗುತ್ತಿದೆ. ಬ್ಯಾಂಕುಗಳಿಗೆ ಪ್ರತಿ ಕಂತು 6 ಸಾವಿರ ಕೋಟಿ ರೂಗಳಂತೆ ಪಾವತಿ ಮಾಡುವುದಾಗಿ ಹೇಳಿಕೆ ನೀಡುತ್ತಿದ್ದು, ಇದೊಂದು ದ್ವಂದ್ವ ನಿಲುವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಬ್ಯಾಂಕುಗಳಿಗೆ ಹಣ ಪಾವತಿಸುವ ನಿರ್ಧಿಷ್ಠ ದಿನಾಂಕ ತಿಳಿಸಬೇಕು, ಮತ್ತು ತಕ್ಷಣ ಬ್ಯಾಂಕುಗಳಿಂದ ರೈತರಿಗೆ ಋಣಮುಕ್ತ ಪತ್ರವನ್ನು ಕೊಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಿವಪ್ರಸಾದ್ ತಿಳಿಸಿದರು.
ಒಂದೆಡೆ ಅತಿವೃಷ್ಟಿ ಮತ್ತು ಇನ್ನೊಂದೆಡೆ ಅನಾವೃಷ್ಟಿಯಿಂದ ರಾಜ್ಯದ ಜನತೆ ಕೃಷಿಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಸಂದರ್ಭದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಅವರು ಕೇವಲ ಓಟ್ ಬ್ಯಾಂಕ್‍ಗಾಗಿ ನಾಟಕ ಮಾಡಿದ್ದಾರೆ ಎಂದಾದರೆ, ರಾಜ್ಯದ ಜನತೆಯ ಪಾಲಿಗೆ ಅವರು ಕಳ ನಾಯಕರಾಗಲಿದ್ದಾರೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ನಾಯಕರಾಗಿ ಎಂಬುದು ಬಿಜೆಪಿಯ ಒತ್ತಾಯವಾಗಿದೆ ಎಂದರು.
ಈ ಸಾಲಿನ ಬಜೆಟ್‍ನಲ್ಲಿ ತುಮಕೂರು ಜಿಲ್ಲೆಗೆ ಹರಿಯಲಿರುವ ಭದ್ರ ಮೇಲ್ದಂಡೆ ಯೋಜನೆ ಮತ್ತು ತುಂಗಭದ್ರಾ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಖಂಡನೀಯ. ಈ ಯೋಜನೆಗಳು ಯಾವಾಗ ಮುಗಿಯಲಿವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಜೆಟ್‍ನಲ್ಲಿ ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಸುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿ 150 ಕೋಟಿ ರೂ. ಮೀಸಲಿಟ್ಟಿದ್ದು, ಸ್ವಾಗತಾರ್ಹ. ಆದರೆ ಇದು ಯಾವುದಕ್ಕೂ ಸಾಲುವುದಿಲ್ಲ, ಇನ್ನೂ ಹೆಚ್ಚು ಅನುದಾನ ಮೀಸಲಿಟ್ಟು ಇಸ್ರೇಲ್ ಮಾದರಿ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ಪ್ರದಾನಮಂತ್ರಿ ನರೇಂದ್ರ ಮೋದಿಯವರು 2022ರ ವೇಳೆಗೆ ರೈತರ ಆರ್ಥಿಕ ಬೆಳೆಗಳು ದ್ವಿಗುಣಗೊಳ್ಳಬೇಕೆನ್ನುವ ನಿಟ್ಟಿನಲ್ಲಿ ರೈತರ ಸುಮಾರು 14 ಬೆಳೆಗಳಿಗೆ ಬೆಂಬಲ ಬೆಲೆಯ ಒಂದೂವರೆ ಪಟ್ಟು ಬೆಲೆ ಹೆಚ್ಚಿಸಿ ರೈತರ ನೆರವಿಗೆ ಬಂದಿದ್ದಾರೆ. ಜೊತೆಗೆ ಆಯಾ ರಾಜ್ಯಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಸರಕಾರಗಳು ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾನು ರಾಜ್ಯದ ಆರುವರೆ ಕೋಟಿ ಜನರ ಮುಲಾಜಿನಲ್ಲಿಲ್ಲ, ನಾನು ಕಾಂಗ್ರೆಸ್‍ನ ಮುಲಾಜಿನಲ್ಲಿದ್ದೇನೆ ಎಂದು ಹೇಳಿಕೆ ನೀಡಿ ಕಣ್ಣೀರು ಸುರಿಸುವುದನ್ನು ಬಿಟ್ಟು, ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರೈತಮೋರ್ಚಾ ಉಪ ಕಾರ್ಯದರ್ಶಿ ಬ್ಯಾಟರಂಗೇಗೌಡ, ರೈತಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್, ರಾಜ್ಯ ಪದಾಧಿಕಾರಿಗಳಾದ ನಂಜೇಗೌಡ, ಬಸವರಾಜ್, ಪ್ರಧಾನ ಕಾರ್ಯದರ್ಶಿ ತರಕಾರಿ ಮಹೇಶ್, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.







