ಮೋದಿಗೆ ಮತ ಹಾಕಿದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ: ಶಿವಸೇನೆ

ಮುಂಬೈ, ಜು. 17: ಮಹಾರಾಷ್ಟ್ರದ ಡೇರಿ ರೈತರ ಪ್ರತಿಭಟನೆಗೆ ಮಂಗಳವಾರ ಬೆಂಬಲ ವ್ಯಕ್ತಪಡಿಸಿರುವ ಶಿವಸೇನೆ, ಬುಲೆಟ್ ರೈಲು ಯೋಜನೆಗೆ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡುವ ಸರಕಾರ ಹಾಲು ಖರೀದಿ ಬೆಲೆಯನ್ನು ಏರಿಕೆ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ.
ಹಾಲು ಖರೀದಿ ಬೆಲೆಯನ್ನು ಪ್ರತಿ ಲೀಟರಿಗೆ ರೂ. 5 ಏರಿಕೆ ಮಾಡುವಂತೆ ಆಗ್ರಹಿಸಿ ರಾಜ್ಯದಲ್ಲಿ ರೈತ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಯ ಒಂದು ಭಾಗವಾಗಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಸೋಮವಾರ ಬೆಳಗ್ಗೆ ಪ್ರತಿಭಟನಕಾರರು ಹಾಲಿನ ಟ್ಯಾಂಕರ್‌ಗಳನ್ನು ತಡೆ ಹಿಡಿದಿದ್ದರು. ‘‘ರಾಜು ಶೆಟ್ಟಿ (ರೈತ ನಾಯಕ) ಆರಂಭಿಸಿದ ಕಾರಣಕ್ಕಾಗಿ ಈ ಚಳವಳಿಯನ್ನು ನಿರ್ಲಕ್ಷಿಸಲಾಗದು. ರೈತರು ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 3000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಮೋದಿ ಅವರಿಗೆ ಮತ ಹಾಕಿದ್ದಾರೆ’’ ಎಂದು ಸೇನೆ ಹೇಳಿದೆ.
ಕಳೆದ ವರ್ಷ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ಸರಕಾರಕ್ಕೆ ಮುಖಭಂಗ ಉಂಟು ಮಾಡಿದೆ. ಡೇರಿ ರೈತರ ಚಳವಳಿ ನಿಗ್ರಹಿಸುವ ಬದಲು ಅವರಿಗೆ ಪರಿಹಾರ ಒದಗಿಸುವ ಬಗ್ಗೆ ರಾಜ್ಯ ಸರಕಾರ ಚಿಂತಿಸಬೇಕು ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.





