ಮಡಿಕೇರಿ: ಮಹಿಳೆ, ಮಕ್ಕಳಿಗಿರುವ ಸೌಲಭ್ಯಗಳ ಬಗ್ಗೆ ಅರಿವು ಕಾರ್ಯಕ್ರಮ

ಮಡಿಕೇರಿ, ಜು.17: ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳು ಹಾಗೂ ಕಾಯ್ದೆಗಳ ಬಗ್ಗೆ ಹಾಡಿ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮ ತಿತಿಮತಿಯ ಗಿರಿಜನ ಹಾಡಿಯ ಸಮುದಾಯ ಭವನದಲ್ಲಿ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಹಕ್ಕುಗಳು, ರಕ್ಷಣೆ, ಪೊಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿವಿಧ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ದೊಡ್ಡ ರೇಷ್ಮೆ, ಚಿಕ್ಕ ರೇಷ್ಮೆ ಹಾಡಿ ಸಮುದಾಯದವರಿಗೆ ಅರಿವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಝ್ ಮಾತನಾಡಿ, ಮಕ್ಕಳ ರಕ್ಷಣೆ ಹಾಗೂ ಪೋಷಣೆ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕವು ಬಾಲನ್ಯಾಯ ಕಾಯ್ದೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಅನಾಥ, ನಿರ್ಗತಿಕ, ಪರಿತ್ಯಕ್ತ, ಶೋಷಣೆಗೊಳಗಾದ ಮಕ್ಕಳಿಗಾಗಿ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರವನ್ನು ಸ್ಥಾಪಿಸಲಾಗಿದೆ. ಎಲ್ಲಿಯಾದರೂ ಬಾಲ್ಯವಿವಾಹ ಪ್ರಕರಣ, ಬಾಲಕಾರ್ಮಿಕ ಪ್ರಕರಣ ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತಂದಲ್ಲಿ ಅಂತಹ ಮಕ್ಕಳಿಗೆ ಸೂಕ್ತ ರಕ್ಷಣೆ ಹಾಗೂ ಪೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವೀರಾಜಪೇಟೆ ತಾಲೂಕು ಸಮಗ್ರ ಗಿರಿಜನ ಕಲ್ಯಾಣಾಧಿಕಾರಿ ಚಂದ್ರಶೇಖರ್, ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೊಸಮನೆ, ವೀರಾಜಪೇಟೆ ತಾಪಂ ಸದಸ್ಯೆ ಆಶಾ ಜೇಮ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಮಾರುತಿ, ತಿತಿಮತಿ ಪೊಲೀಸ್ ಠಾಣೆಯ ಎಎಸ್ಸೈ ಹೊಂಬಾಳಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಿತಿಮತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾಕರ ಎಚ್.ಟಿ., ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಖಜಾಂಚಿ ರಜನಿ, ಹಾಡಿ ಮುಖಂಡರಾದ ಸಿದ್ಧ, ಪಂಚಾಯತ್ ಸದಸ್ಯರಾದ ಮುತ್ತ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಹಾಡಿ ಜನರು, ತಿತಿಮತಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕೆ.ಎಚ್.ಪ್ರಭಾವತಿ ನಿರೂಪಿಸಿದರು. ನಂತರದಲ್ಲಿ ಮಕ್ಕಳ ಹಕ್ಕುಗಳು, ರಕ್ಷಣೆ, ಬಾಲ್ಯವಿವಾಹ, ಪೊಕ್ಸೊ ಕಾಯ್ದೆ ಕುರಿತು ಹಾಡಿಯ ಜನರಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು.







