ಜುಲೆ 21ರಿಂದ ಇಂಗ್ಲೆಂಡ್‌ನಲ್ಲಿ ಮಹಿಳಾ ಹಾಕಿ ವಿಶ್ವಕಪ್

ಹೊಸದಿಲ್ಲಿ, ಜು.17: ಇಂಗ್ಲೆಂಡ್‌ನಲ್ಲಿ ಜುಲೈ 21ರಿಂದ ಆಗಸ್ಟ್ 5ರ ತನಕ ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿಯು ನಡೆಯಲಿದ್ದು, ಲಂಡನ್‌ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ.
ಕೋಚ್ ಶೋರ್ಡ್ ಮ್ಯಾರಿಜ್ನೆ ಮತ್ತು ಸ್ಟ್ರೈಕರ್ ರಾಣಿ ರಾಂಪಾಲ್ ನಾಯಕತ್ವದ ತಂಡ ರವಿವಾರ ಲಂಡನ್‌ಗೆ ಪ್ರಯಾಣ ಬೆಳೆಸಿದೆ. ಭಾರತದ ತಂಡ ಸ್ಪೇನ್‌ನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಉತ್ತಮ ತಯಾರಿ ನಡೆಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-2 ಸಮಬಲ ಸಾಧಿಸಿದೆ.
ಎಫ್‌ಐಎಚ್ ರ್ಯಾಂಕಿಂಗ್‌ನಲ್ಲಿ ನಂ.10ನೇ ಸ್ಥಾನದಲ್ಲಿರುವ ಭಾರತದ ಜೊತೆ ‘ಬಿ’ ಗುಂಪಿನಲ್ಲಿ ನಂ.2 ಇಂಗ್ಲೆಂಡ್, ನಂ.7 ಅಮೆರಿಕ ಮತ್ತು ನಂ.16 ಐರ್ಲೆಂಡ್ ಸ್ಥಾನ ಪಡೆದಿದೆ.
ಗ್ರೂಪ್ ಹಂತದಲ್ಲಿ ಮೊದಲ ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲಿವೆ. 2 ಮತ್ತು 3ನೇ ಸ್ಥಾನ ಗಳಿಸುವ ತಂಡಗಳು ಕ್ರಾಸ್ ಓವರ್ ಪಂದ್ಯಗಳಲ್ಲಿ ಆಡುವುದರ ಮೂಲಕ ಉಳಿದ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಲಿವೆ.
ಅರ್ಜೆಂಟೀನ, ಆಸ್ಟ್ರೇಲಿಯ, ಬೆಲ್ಜಿಯಂ, ಚೀನಾ, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಹಾಲೆಂಡ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ ಮತ್ತು ಸ್ಪೇನ್ ಕಣದಲ್ಲಿರುವ ಇತರ 12 ತಂಡಗಳು. ಭಾರತ 1974ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವಕಪ್‌ನಲ್ಲಿ 4ನೇ ಸ್ಥಾನ ಪಡೆದಿತ್ತು. ಪಶ್ಚಿಮ ಜರ್ಮನಿ ವಿರುದ್ಧ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 0-2 ಅಂತರದಲ್ಲಿ ಸೋಲು ಅನುಭವಿಸಿ ಕಂಚು ಪಡೆದಿತ್ತು.
ಈ ಬಾರಿ ವಿಶ್ವಕಪ್‌ನಲ್ಲಿ ಆಡಲಿರುವ ಭಾರತದ ತಂಡದಲ್ಲಿರುವ 18 ಮಂದಿ ಆಟಗಾರ್ತಿಯರ ಪೈಕಿ 16 ಮಂದಿ ಮೊದಲ ಬಾರಿ ಪಾಲ್ಗೊಳ್ಳಲಿದ್ದಾರೆ. ನಾಯಕಿ ರಾಣಿ ರಾಂಪಾಲ್ ಮಾತ್ರ ಹಿಂದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದ ಹಿರಿಯ ಆಟಗಾರ್ತಿ.
ಹಾಲಿ ಚಾಂಪಿಯನ್ ಹಾಲೆಂಡ್ ವಿಶ್ವಕಪ್‌ನಲ್ಲಿ 7 ಬಾರಿ ಪ್ರಶಸ್ತಿ ಜಯಿಸಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ.







