ಸ್ವಾಮಿ ಅಗ್ನಿವೇಶ್‌ಗೆ ಹಲ್ಲೆ: ಮಂಗಳೂರು ಸೆಂಟ್ರಲ್ ಕಮಿಟಿ ಖಂಡನೆ
ಮಂಗಳೂರು, ಜು.18: ಜಾನುವಾರು ಸಾಗಾಟದ ನೆಪದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಸಂಘಪರಿವಾರದ ಕಾರ್ಯಕರ್ತರು ಇದೀಗ ಪ್ರಗತಿಪರ ಚಿಂತಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ಗೆ ಜಾರ್ಖಂಡ್‌ನಲ್ಲಿ ಹಲ್ಲೆ ನಡೆಸಿದ ಹೇಯ ಕೃತ್ಯವನ್ನು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಖಂಡಿಸಿದ್ದಾರೆ.
ಸ್ವಾಮಿ ಅಗ್ನಿವೇಶ್‌ರ ವಯಸ್ಸನ್ನೂ ಪರಿಗಣಿಸದೆ ನೆಲಕ್ಕೆ ಕೆಡವಿ ಹಲ್ಲೆ ನಡೆಸುವ ಮೂಲಕ ಸಂಘಪರಿವಾರವು ತನ್ನ ಸಂಸ್ಕೃತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಾನು ಉಳಿದುಕೊಂಡಿದ್ದ ಹೊಟೇಲ್‌ನಿಂದ ಹೊರಡುವಾಗ ಹಲ್ಲೆ ನಡೆಸಲಾಗಿದೆ. ಹೊಟೇಲ್‌ನಲ್ಲಿರುವ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಕೂಡ ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಅಕ್ಷಮ್ಯ. ಮುಖ್ಯಮಂತ್ರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದರೂ ಕೂಡ ಪರಿಣಾಮ ನಿರೀಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯಾಲಯವು ಸರಕಾರ, ಜಿಲ್ಲಾ ಆಡಳಿತಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.





