ತಾ.ಪಂ. ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ, ಜು. 18: ‘ಕಚೇರಿಗೂ ಬರುವುದಿಲ್ಲ, ರಜೆಯನ್ನು ಹಾಕದೇ ಗೈರು ಹಾಜರಾಗಿದ್ದೀರಿ, ಎಂಟು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ, ದುರಸ್ತಿ ಮಾಡಲು ಕ್ರಮ ಕೈಗೊಂಡಿಲ್ಲವೆಂದರೆ ಏನು ಕೆಲಸ ಮಾಡ್ತೀರಿ’ ಎಂದು ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಜಿಲ್ಲೆಯ ಬಾದಾಮಿ ತಾಲೂಕು ಪಂಚಾಯತ್ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶುದ್ಧೀಕರಣ ಮಾಡದ ಅಧಿಕಾರಿ ವೆಂಕಟೇಶ ನಾಯಕ ಅವರನ್ನು ತಕ್ಷಣವೇ ಅಮಾನತು ಮಾಡಿ ಎಂದು ಜಿ.ಪಂ. ಸಿಇಒಗೆ ಸೂಚನೆ ನೀಡಿದರು.
‘ನೀವು ಎಷ್ಟು ಶಾಲೆಗೆ ಭೇಟಿ ಮಾಡಿದ್ದೀರಿ? ಯಾವ ಸಮಸ್ಯೆ ಬಗೆಹರಿಸಿದ್ದೀರಿ. ಡೈರಿಯಲ್ಲಿ ನಮೂದು ಮಾಡಿದ್ದನ್ನು ತೋರಿಸುವಂತೆ ಬಿಇಓಗೆ ಪ್ರಶ್ನಿಸಿದ ಅವರು, ಡೈರಿ ಇಲ್ಲ, ಆಫೀಸ್‌ನಲ್ಲಿದೆ ಅಂಥ ಹೇಳ್ತೀರಲ್ಲ, ಸಭೆಗೆ ಬಂದಿದ್ದೇಕೆ? ಕೆಡಿಪಿಗೆ ಬರಬೇಕಾದ್ರೆ ಮಾಹಿತಿ ತರಬೇಕು ಅನ್ನೋ ಕನಿಷ್ಠ ಜ್ಞಾನ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲ ಇಲಾಖೆ ಅಧಿಕಾರಿಗಳು ಡೈರಿ ನಿರ್ವಹಿಸಬೇಕು. ಕೇಳಿದಾಗ ಅದನ್ನು ತೋರಿಸಬೇಕು. ಇವತ್ತು ಎಲ್ಲರಿಗೂ ಎಚ್ಚರಿಕೆ ನೀಡುವೆ ಎಂದ ಅವರು, ಇದರಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಸರಕಾರದ ಕೆಲಸವೆಂದರೆ ಹುಡುಗಾಟವಲ್ಲ ಎಂದು ಎಚ್ಚರಿಸಿದರು.
ನಿಮಗೆ ಸರಕಾರಿ ಕೆಲಸ ಮಾಡುವುದಕ್ಕೆ ಆಗದಿದ್ದರೆ ಕೂಡಲೇ ಜಾಗ ಖಾಲಿ ಮಾಡಿ. ಸಾರ್ವಜನಿಕರು ಅಥವಾ ರೈತರು ನಿಮ್ಮ ಬಗ್ಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇನೆ. ಕಚೇರಿಯಲ್ಲಿ ಲಭ್ಯ ಇರುವ ಸಮಯ ಜನರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.