ಗ್ರಹಣದ ನಂತರ ರಾಜ್ಯ ಪ್ರವಾಸ: ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ, ಜು.18: ಈ ತಿಂಗಳ 27 ರಂದು ಸಂಭವಿಸಲಿರುವ ಗ್ರಹಣ ಅತ್ಯಂತ ಕೆಟ್ಟದ್ದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ನಡೆಸಬಾರದು. ಇದು ಯಾರಿಗೂ ಒಳ್ಳೆಯದಲ್ಲ. ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ನಡೆಸುತ್ತೆನೆ. ಗ್ರಹಣದ ಸಮಯದಲ್ಲಿ ಯಾವುದೇ ಅವಘಡ ಸಂಭವಿಸದಿರಲಿ ಎಂದು ಪ್ರಾರ್ಥಿಸುವುದನ್ನು ಬಿಟ್ಟು, ಬೇರೆ ದಾರಿಯಿಲ್ಲ. ರಾಜ್ಯದ ಜನರು ಗ್ರಹಣದ ಬಗ್ಗೆ ಎಚ್ಚರವಹಿಸಬೇಕು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ಪ್ರಮುಖ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ಒಂದೇ ತಿಂಗಳಲ್ಲಿ ಎರಡು ಬಾರಿ ಅಮವಾಸ್ಯೆ ಬಂದಿದೆ. ಜು. 27 ರಂದು ಸಂಭವಿಸಲಿರುವ ಗ್ರಹಣ ಅತ್ಯಂತ ಕೆಟ್ಟದ್ದು ಎಂದು ಟಿ.ವಿ. ಮಾಧ್ಯಮದಲ್ಲಿ ಬರುತ್ತಿದೆ. ಹಾಗಾಗಿ ಆ ದಿನ ಯಾವುದೇ ಶುಭ ಕಾರ್ಯ ನಡೆಸಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, ಗ್ರಹಣದ ಘೋರ ಪರಿಣಾಮಗಳಿಂದ ಜನರನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಬೇಕಿದೆ. ಇನ್ನು ಗ್ರಹಣ ಕಳೆದ ನಂತರವೇ ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಅಧಿಕಾರಕ್ಕೆ ಬರಬೇಕು: ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬಗೆಹರಿಸಿಕೊಂಡು, ಚುನಾವಣೆಗೆ ಪಕ್ಷ ಸಜ್ಜುಗೊಳಿಸಬೇಕು ಎಂದು ಮುಖಂಡರು - ಕಾರ್ಯಕರ್ತರಿಗೆ ಸಲಹೆ ನೀಡಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆಯೇರಬೇಕು. ಕನಿಷ್ಠ ಪಕ್ಷದ 25 ಸದಸ್ಯರು ಆಯ್ಕೆಯಾಗಬೇಕು. ಶಿವಮೊಗ್ಗ ನಗರದಲ್ಲಿ ನಮ್ಮ ಪಕ್ಷದ ಶಾಸಕರೇ ಇರುವುದರಿಂದ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಶಿವಮೊಗ್ಗಕ್ಕೆ 183 ಹಾಗೂ ಭದ್ರಾವತಿಗೆ 141 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯದಂತಹ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಇದರಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ವಾಗ್ದಾಳಿ: ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಜನರಿಗೆ ಮಾಹಿತಿ ನೀಡಬೇಕೆಂದು ಸದನದಲ್ಲಿ ಒತ್ತಾಯಿಸಿದೆ. ಆದರೆ ಮುಖ್ಯಮಂತ್ರಿಗಳು ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಈಗಲಾದರೂ ಆರ್ಥಿಕ ಸ್ಥಿತಿ ಕುರಿತ ಮಾಹಿತಿ ಬಹಿರಂಗಪಡಿಸಬೇಕು. ಹಾಗೆಯೇ ಸಾಲಮನ್ನಾ ಕುರಿತಂತೆ ಉದ್ಭವವಾಗಿರುವ ಗೊಂದಲ ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.







