ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಶೋಕ್ 8 ದಿನ ಕಳೆದರೂ ಪತ್ತೆಯಿಲ್ಲ !
ಚಿಕ್ಕಮಗಳೂರು, ಜು.18: ಕಳೆದೊಂದು ವಾರದ ಹಿಂದೆ ಹಳ್ಳವೊಂದರ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೂಲಿ ಕಾರ್ಮಿಕ ಅಶೋಕ್ 8 ದಿನ ಕಳೆದರೂ ಪತ್ತೆಯಾಗಿಲ್ಲ. ಯುವಕನ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ಎನ್‍ಡಿಆರ್‍ಎಫ್ ತಂಡ ಈಗಾಗಲೇ ಶೋಧ ಕಾರ್ಯ ಕೈಬಿಟ್ಟಿದ್ದು, ಸ್ಥಳೀಯ ಮುಳುಗು ತಜ್ಞರು ಹಳ್ಳದಲ್ಲಿ ಶೋಧ ಮುಂದುವರಿಸಿದ್ದಾರೆ.
8 ದಿನಗಳ ಹಿಂದೆ ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯ ಕೊಗ್ರೆ ಎಂಬಲ್ಲಿ ಹರಿಯುವ ಬಸ್ತಿ ಹಳ್ಳದ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಓಡಿಸುವ ಭರದಲ್ಲಿ ಅಶೋಕ್ ಬೈಕ್ ಸಹಿತ ಕೊಚ್ಚಿ ಹೋಗಿದ್ದಾನೆ ಎನ್ನಲಾಗುತ್ತಿದ್ದು, ಹಳ್ಳದಲ್ಲಿ ಬೈಕ್ ಪತ್ತೆಯಾಗಿತ್ತಾದರೂ ಆಶೋಕ್‍ನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಜಿಲ್ಲಾಡಳಿತ ಅಶೋಕ್‍ಗಾಗಿ ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿ ಮೂಲಕ ಶೋಧ ಕಾರ್ಯ ಮುಂದುವರಿಸಿತ್ತು. ಆದರೆ ಅಶೋಕ್ ಬಗ್ಗೆ ಯಾವುದೇ ಸುಳಿವು ಸಿಗದೆ ನಿರಾಶರಾದ ತಂಡದ ಸಿಬ್ಬಂದಿ ಕಳೆದ ಶನಿವಾರ ಶೋಧ ಕಾರ್ಯ ಕೈಬಿಟ್ಟಿತ್ತು.
ಆದರೆ ಕೊಗ್ರೆ ಗ್ರಾಮದ ಸ್ಥಳೀಯ ಮುಖಂಡರು ರವಿವಾರದಿಂದ ಯುವಕನಿಗಾಗಿ ಸ್ಥಳೀಯ ಬಾಳೆಹೊಳೆ ಗ್ರಾಮದ ಸ್ಥಳೀಯ ಮುಳುಗು ತಜ್ಞರ ನೆರವಿನಿಂದ ಹಳ್ಳದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸ್ಥಳೀಯರೇ ವಂತಿಗೆ ಸಂಗ್ರಹಿಸುವ ಮೂಲಕ ಮುಳುಗು ತಜ್ಞರಿಗೆ ಊಟ, ವಸತಿ, ವೇತನ ನೀಡಲು ಮುಂದಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತದ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಅಶೋಕ್ ಮನೆಗೆ ಶಾಸಕ ರಾಜೇಗೌಡ ಭೇಟಿ
ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಕಾರೆಮನೆ ಅಶೋಕ್ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಶಾಸಕ ಟಿ.ಡಿ ರಾಜೇಗೌಡ ಭೇಟಿ ನೀಡಿ ಸಂತೃಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವಿಧಾನಮಂಡಲದ ಅಧಿವೇಶನದಲ್ಲಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಬಹುಮುಖ್ಯವಾದ ಚರ್ಚೆಗಳು ಇದ್ದ ಕಾರಣ ಹಾಗೂ ಶುಕ್ರವಾರದವರೆಗೂ ಅಧಿವೇಶನ ಇದ್ದ ಕಾರಣ ತಡವಾಗಿ ಇಲ್ಲಿಗೆ ಭೇಟಿ ನೀಡಿದ್ದು, ಮುಳುಗುತಜ್ಞರೊಂದಿಗೆ ಹಾಗೂ ಮಂಗಳೂರಿನ ಇನ್ನೊಂದು ತಂಡವನ್ನು ಕರೆಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಿದ್ದೇನೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ಸಂತೃಸ್ತ ಕುಟುಂಬಕ್ಕೆ ಪರಿಹಾರಧನವನ್ನು ಕೊಡಿಸುವ ಜೊತೆಗೆ ಹುಲ್ಲಿನಗದ್ದೆ ಸೇತುವೆಯನ್ನು ತೆಗೆದು ನೂತನ ಸೇತುವೆಯನ್ನು ನಿರ್ಮಾಣ ಮಾಡಲಿದ್ದೇವೆ ಎಂದರು.
ಸ್ಥಳದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಚ್.ಎಂ ಸತೀಶ್, ಡಿ.ಬಿ.ರಾಜೇಂದ್ರ, ಕುಕ್ಕುಡಿಗೆ ರವೀಂದ್ರ, ಪಣಿರಾಜ್, ಪ್ರವೀಣ್, ಬಸರೀಕಟ್ಟೆ ಸತೀಶ್ ಇದ್ದರು.
ಬಾಳೆಹೊಳೆಯ ಮುಳುಗುತಜ್ಞ ಭಾಸ್ಕರ್ ಎಂಬವರು ತನ್ನ ಜೀವದ ಹಂಗು ತೊರೆದು ರಭಸದಿಂದ ಹರಿಯುವ ನೀರಿನಲ್ಲಿ ಅಶೋಕನ ದೇಹ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಕನಿಷ್ಠ ಊಟವನ್ನೂ ನೀಡಿಲ್ಲ, ಕನಿಷ್ಠ ಸಂಬಳವನ್ನೂ ನೀಡುತ್ತಿಲ್ಲ. ದಿನನಿತ್ಯ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಊಟ ಹಾಗೂ ಗೌರವಧನ ನೀಡಿದ್ದೇವೆ.
- ದೇವರಾಜ್, ಕೊಗ್ರೆ ನಿವಾಸಿ