ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣ ಸಹಕಾರ: ಎಚ್.ಡಿ.ಕುಮಾರಸ್ವಾಮಿ
"2006ರಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದು ನನ್ನ ರಾಜಕೀಯ ಜೀವನದ ಕಪ್ಪುಚುಕ್ಕೆ"

ಬೆಂಗಳೂರು, ಜು.18: ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೆ ಮುಂದೆ ಬಂದು ನೀಡಿದ ಸಹಕಾರದಿಂದ ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಸ್ಥಾಪಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೊಸದಿಲ್ಲಿಯಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ರಾಜ್ಯದಲ್ಲೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದಲೂ ಸಹಕಾರ ದೊರೆಯುತ್ತಿದೆ ಎಂದರು.
ಇತ್ತೀಚೆಗಷ್ಟೇ ನಾನು ನನ್ನ ಚೊಚ್ಚಲ 2.19 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದೇನೆ. ಇದಕ್ಕಾಗಿ ಅಧಿವೇಶನದಲ್ಲಿ ಅನುಮತಿಯನ್ನು ಪಡೆದು ಕೊಂಡಿದ್ದೇನೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ನನಗೆ ಒಂದು ಅವಕಾಶವನ್ನು ರಾಹುಲ್ ಗಾಂಧಿ ಕಲ್ಪಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
2006ರಲ್ಲಿ ನಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟಿದ್ದೇನೆ. ಅಂದು ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದ್ದು ನನ್ನ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. ಆ ತಪ್ಪನ್ನು ತಿದ್ದಿಕೊಳ್ಳಲು ನನಗೆ ಒಂದು ಅವಕಾಶ ಸಿಕ್ಕಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸರಕಾರ ರಚಿಸಿದ್ದೇವೆ ಎಂದು ಅವರು ತಿಳಿಸಿದರು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ನಾನು ರೈತರ ಸಾಲ ಮನ್ನಾ ಮಾಡಲು ಕಷ್ಟ ಪಟ್ಟಿದ್ದೇನೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೂ ನನ್ನನ್ನು ಜನರು ಬೆಂಬಲಿಸುತ್ತಿಲ್ಲ. ಅವರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವನ್ನು ವ್ಯಕ್ತ ಪಡಿಸುವಾಗ ಪಕ್ಷದ ಖಾಸಗಿ ಸಭೆಯಲ್ಲಿ ಭಾವನಾತ್ಮಕವಾಗಿದ್ದು ನಿಜ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ನನಗೆ ಕಿರುಕುಳ ನೀಡುತ್ತಿದೆ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ರಾಜ್ಯದ ಸಂಸದರೊಬ್ಬರು ಐಫೋನ್ ನೀಡಿರುವ ಬಗ್ಗೆ ಮಾಡಿರುವ ಟ್ವೀಟ್ ಅನ್ನು ಗಮನಿಸಿದ್ದೇನೆ. ಈ ಬಗ್ಗೆ ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲವೆಂದು ಭಾವಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಸುಮಾರು 34 ಸಾವಿರ ಕೋಟಿ ರೂ.ಗಳ ರೈತರ ಸಾಲವನ್ನು ಮನ್ನಾ ಮಾಡಿದ್ದೇನೆ. ರೈತರ ಸಾಲ ಮನ್ನಾದಿಂದ ಅವರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎನ್ನುವ ವಾಸ್ತವಾಂಶವನ್ನು ನಾನು ಅರಿತಿದ್ದೇನೆ. ಅವರಿಗಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಅವರ ಜೀವನಮಟ್ಟವನ್ನು ಮೇಲೆತ್ತಲು ಪ್ರಯತ್ನಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.







