ಪಚ್ಚೆವನ ಸಿರಿ ಅಭಿಯಾನ- ಭೂಶಾಂತಿ ಬಾಗಿನ ಲೋಕಾರ್ಪಣೆ

ಉಡುಪಿ, ಜು.18: ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಪಚ್ಚೆವನ ಭಾರತ ದರ್ಶನ ಜೈವಿಕ ಪರಿಸರ ಅಧ್ಯಯನ ಮಹಾ ಒಕ್ಕೂಟ ವತಿಯಿಂದ ಜೀವ ವೈವಿಧ್ಯಗಳ ಪರಿಸರ ಸಂರಕ್ಷಣೆಗಾಗಿ ಪಚ್ಚೆವನ ಸಿರಿ ಅಭಿಯಾನ- ಭೂಶಾಂತಿ ಬಾಗಿನ ಲೋಕಾರ್ಪಣೆ ಕಾರ್ಯಕ್ರಮವನ್ನು ಬುಧವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನವನ್ನು ಉದ್ಘಾಟಿಸಿ, ಭೂಶಾಂತಿ ಬಾಗಿನ ಲೋಕಾರ್ಪಣೆಗೈದ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ವಿಶ್ವದಲ್ಲಿರುವ ಎಲ್ಲ ಜೀವಿಗಳು ಸಮಾ ತೋಲನ ಕಾಪಾಡಿಕೊಂಡು ಬದುಕಬೇಕಾಗಿದೆ. ಇದರಲ್ಲಿ ಸ್ವಲ್ಪ ಅಸಮಾ ತೋಲನವಾದರೂ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ ಎಂದರು.
ಪ್ರತಿಯೊಂದು ಜೀವಿಗಳಲ್ಲಿಯೂ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಅವುಗಳು ಪ್ರಕೃತಿಗೆ ಅತಿ ಅಗತ್ಯವಾಗಿರುತ್ತದೆ. ಆದುದರಿಂದ ಎಲ್ಲ ಜೀವಿಗಳನ್ನು ಸಮಾನವಾಗಿ ಕಾಣುವ ಮೂಲಕ ಪ್ರಾಕೃತಿಕ ಸಮಾತೋಲನ ಕಾಪಾಡಲು ನಾವೆಲ್ಲ ಕಟಿಬದ್ಧರಾಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹೈದರಬಾದಿನ ಫೋಸಿಲ್ಸ್‌ನ ಅಧ್ಯಕ್ಷ ಪ್ರೊ.ಭಕ್ತವತ್ಸಲ ರೆಡ್ಡಿ, ಸಂಶೋಧಕ ನಾಗೇಶ್ ಕಲ್ಲೂರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವೈ.ಎನ್.ಶೆಟ್ಟಿ, ಪಣಂಬೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ಶಿಯಾ ಎಸ್., ತುಳುಕೂಟದ ಅಧ್ಯಕ್ಷ ಜಯ ಕರ ಶೆಟ್ಟಿ ಇಂದ್ರಾಳಿ ಉಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿದರು. ಜಾನಪದ ಮತ್ತು ಇತಿಹಾಸ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.







