ಕರ್ನಾಟಕ-ಕೇರಳ ಸರಕಾರ ಒಪ್ಪಿದಲ್ಲಿ ಮೇಲ್ಸೇತುವೆ ನಿರ್ಮಾಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಲ್ಲಿ, ಜು.18: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212 ಕರ್ನಾಟಕ ಮತ್ತು ಕೇರಳವನ್ನು ಬೆಸೆಯುತ್ತದೆ. ಈ ಮಾರ್ಗವು ವನ್ಯಜೀವಿಗಳಿರುವ ಪ್ರದೇಶದಲ್ಲಿ ಹಾದುಹೋಗುತ್ತದೆ. ಈ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದೆ. ಸುಮಾರು 5 ಕಿ.ಮೀ ಮಾರ್ಗವನ್ನು ಮೇಲ್ಸೇತುವೆ ಹೆದ್ದಾರಿಯನ್ನಾಗಿಸಿ, ಕೆಳಭಾಗದಲ್ಲಿ ಪ್ರಾಣಿಗಳಿಗೆ ಅಡಚಣೆ ಇಲ್ಲದಂತೆ ಸಂಚರಿಸಲು ಅನುವು ಮಾಡಿಕೊಡಲು ಕೇಂದ್ರ ಸರಕಾರವು ಉತ್ಸುಕವಾಗಿದೆ ಎಂದು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಲು ತಮ್ಮನ್ನು ಭೇಟಿಯಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣಗೆ ಅವರು ಈ ವಿಷಯವನ್ನು ತಿಳಿಸಿದರು.
ಈ ಬಗ್ಗೆ ಕರ್ನಾಟಕ ಮತ್ತು ಕೇರಳ ಸರಕಾರಗಳು ಒಮ್ಮತದಿಂದ ಚರ್ಚಿಸಿಕೊಂಡು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದಲ್ಲಿ ಮೇಲ್ಸೇತುವೆ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ನಿತಿನ್ ಗಡ್ಕರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಸಂಬಂಧ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಕೇಂದ್ರ ರಸ್ತೆ ನಿಧಿಯ(ಸಿಆರ್‌ಎಫ್) ಅನುದಾನದಿಂದ ರಾಜ್ಯದಲ್ಲಿ ಹಲವಾರು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದ ವೇಳೆಯಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರುವುದನ್ನು ಪುಷ್ಟೀಕರಿಸುವ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿದ ತಕ್ಷಣವೇ ರಾಜ್ಯದ ಪಾಲಿನ ಅನುದಾವನ್ನು ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದರು.







