ಜು.21ಕ್ಕೆ ಸಂಸತ್ ಸದಸ್ಯರ ನಿವಾಸದ ಮುಂದೆ ಧರಣಿ ಸತ್ಯಾಗ್ರಹ: ಮಾತೆ ಮಹಾದೇವಿ
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹ

ಬೆಂಗಳೂರು, ಜು. 18: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ಜುಲೈ 21ರ ಶನಿವಾರ ರಾಜ್ಯಾದ್ಯಂತ ಸಂಸತ್ ಸದಸ್ಯರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಶಿಫಾರಸ್ಸು ಮಾಡಿ ಅದನ್ನು ಕೇಂದ್ರ ಸರಕಾರದ ಅನುಮತಿಗೆ ಕಳಿಸಿಕೊಟ್ಟಿದೆ. ಆದರೆ ಕೇಂದ್ರ ಸರಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದುದರಿಂದ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು, ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಮಾತೆ ಮಹಾದೇವಿ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ಶಿಫಾರಸ್ಸನ್ನು ಮಾನ್ಯ ಮಾಡುವಂತೆ ಕೋರಿ ಹಾಗೂ ಕೇಂದ್ರ ಸರಕಾರದ ನಿರ್ಲಕ್ಷ ಧೋರಣೆ ಪ್ರತಿಭಟನೆ ರಾಜ್ಯಾದ್ಯಂತ ರಾಷ್ಟ್ರೀಯ ಬಸವ ದಳ, ಬಸವ ತತ್ವಪರ ಸಂಘಟನೆಗಳು ಸತ್ಯಾಗ್ರಹ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.





