ಮೈಸೂರು: ಮನು ಬಳಿಗಾರ್ ವಿರುದ್ಧ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ
ಮೈಸೂರು,ಜು.18: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರ ವಿರುದ್ಧ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸರ್ಕಾರದ ಅನುದಾನವನ್ನು ಬಳಸಿಕೊಂಡು ಕೇವಲ ಸಮ್ಮೇಳನಗಳನ್ನು, ಗೋಷ್ಠಿ, ಪುಸ್ತಕಮೇಳಗಳನ್ನು ನಡೆಸುವುದೇ ತಮ್ಮ ಜವಾಬ್ದಾರಿ ಎಂದುಕೊಂಡಿರುವ ಕಸಾಪ ಅಧ್ಯಕ್ಷರು ಹಿಂದಿನ ಸಮ್ಮೇಳನದ ಲೆಕ್ಕವನ್ನು ಇದುವರೆಗೂ ನೀಡಿಲ್ಲ. ಮೈಸೂರಿನಲ್ಲಿ ನಡೆದ ಸಮ್ಮೇಳನ ಕೂಡ ಗೊಂದಲದಲ್ಲಿಯೇ ನಡೆದಿದೆ. ಒಂದೇ ತಿಂಗಳಲ್ಲಿ ಲೆಕ್ಕ ಕೊಡುತ್ತೇವೆಂದು ಭರವಸೆ ನೀಡಿದ್ದು ಬಿಟ್ಟರೆ ಒಂದು ವರ್ಷವಾದರೂ ಲೆಕ್ಕವನ್ನು ಕೊಡದೇ ಮತ್ತೊಂದು ಸಮ್ಮೇಳನಕ್ಕೆ ಸಜ್ಜಾಗುತ್ತಿದ್ದಾರೆ. ಸರ್ಕಾರ ಸೂಕ್ತ ಆಡಳಿತಾಧಿಕಾರಿಯನ್ನು ನೇಮಿಸಿ ಭ್ರಷ್ಟಾಚಾರವನ್ನು ತಡೆಯಬೇಕು. ಭ್ರಷ್ಟಾಚಾರ ಕುರಿತು ಕೇಂದ್ರ ತನಿಖಾದಳದಿಂದ ತನಿಕೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದಗೌಡ, ಗುರು, ರಾಧಾಕೃಷ್ಣ, ಗೋಪಿ, ರಮೇಶ್ ಕುಮಾರ್, ಮಿನಿಬಂಗಾರಪ್ಪ, ಕಾವೇರಮ್ಮ, ಗಿರೀಶ್, ಸತೀಶ್, ಅರವಿಂದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.