ಔಷಧ ಕ್ಷೇತ್ರದಲ್ಲಿ ವಿದೇಶದ ಅವಲಂಬನೆ ಬೇಡ: ಕರ್ನಾಟಕ ಕೇಂದ್ರೀಯ ವಿ.ವಿ ಕುಲಪತಿ ಎನ್.ಆರ್.ಶೆಟ್ಟಿ

ಬೆಂಗಳೂರು, ಜು.19: ದೇಶದ ಔಷಧ ಕ್ಷೇತ್ರದ ಪರಂಪರೆಯು 3 ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದೆ. ಆದಾಗ್ಯು ಔಷಧ ಕ್ಷೇತ್ರದಲ್ಲಿ ವಿದೇಶಿ ಔಷಧಿಗಳತ್ತ ಮುಖ ಮಾಡಿರುವುದು ಸರಿಯಲ್ಲವೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎನ್.ಆರ್.ಶೆಟ್ಟಿ ಅಭಿಪ್ರಾಯಿಸಿದರು.
ಬುಧವಾರ ವಿ.ಶಿವರಾಮ್ ಸಂಶೋಧನಾ ಸಂಸ್ಥೆ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಔಷಧೀಯ ಗಿಡಗಳ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಔಷಧಿ ಕ್ಷೇತ್ರದ ಬೆಳವಣಿಗೆಗೆ ವಿದೇಶಗಳೊಂದಿಗೆ ಅವಲಂಬನೆ ಆಗುವ ಅಗತ್ಯವಿಲ್ಲ. ನಮ್ಮ ಪರಂಪರೆಯ ಜ್ಞಾನವನ್ನು ಮತ್ತೊಮ್ಮೆ ಪಡೆದುಕೊಳ್ಳುವಂತಹ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಗಿಡಮೂಲಿಕೆಗಳ ಮೂಲಕ ಔಷಧಿ ತಯಾರಿಕೆಯಲ್ಲಿ ದೇಶವು ಅಗಾಧವಾದ ಪಾಂಡಿತ್ಯವನ್ನು ಹೊಂದಿದೆ. ಆದರೆ, ವಿದೇಶಿ ಆಕ್ರಮಣ ಹಾಗೂ ಇತ್ತೀಚಿನ ಆಧುನೀಕರಣ, ಜಾಗತೀಕರಣದ ಪರಿಣಾಮದಿಂದಾಗಿ ನಮ್ಮ ಔಷಧಿ ಹಾಗೂ ಜ್ಞಾನ ಅಳಿವಿನ ಅಂಚಿಗೆ ತಲುಪಿದೆ. ಈಗ ಅದನ್ನು ಪುನರ್ ಸಂಶೋಧಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಆಶಿಸಿದರು.
ಸಾವಿರ ವರ್ಷಗಳ ಹಿಂದೆಯೆ ದೇಶದಲ್ಲಿ 300ರೀತಿಯ ಶಸ್ತ್ರಚಿಕಿತ್ಸಾ ಪದ್ಧತಿಯಿತ್ತು. ಮೂಳೆ ಮುರಿತ ಸೇರಿದಂತೆ ಎಲ್ಲ ರೀತಿಯ ಗಂಭೀರ ಖಾಯಿಲೆಗಳಿಗೆ ಗಿಡಮೂಲಿಕೆಗಳಿಂದ ಔಷಧಿ ನೀಡಲಾಗುತ್ತಿತ್ತು. ನಮ್ಮ ಔಷಧಿಗಳ ಕುರಿತು ಅಧ್ಯಯನಕ್ಕಾಗಿ ನಳಂದಾ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ, ಈಗ ನಾವು ವಿದೇಶಗಳಿಗೆ ಹೋಗಿ ಕಲಿಯಬೇಕಾದಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ.ಭೈರಪ್ಪ ಮಾತನಾಡಿ, ಔಷಧ ಕ್ಷೇತ್ರದಲ್ಲಿ ದೇಶದ ಪರಂಪರೆ ಶ್ರೀಮಂತವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತೀರ ಹಿಂದುಳಿದಿರುವುದು ಆತಂಕಕ್ಕೆ ಈಡು ಮಾಡಿದೆ. ಸಿಂಗಾಪುರ್, ಸ್ವೀಡನ್ ಸೇರಿದಂತೆ ಸಣ್ಣ ದೇಶಗಳು ಆರೋಗ್ಯದಲ್ಲಿ ಉತ್ತಮ ಸ್ಥಾನ ಪಡೆದಿರುವಾಗ ನಮ್ಮಲ್ಲಿ ಯಾಕೆ ಹೀಗಾಗಿದೆ ಎಂಬುದನ್ನು ಚರ್ಚಿಸಿ, ಸೂಕ್ತ ಪರಿಹಾರೋಪಾಯಗಳನ್ನು ಪಡೆದುಕೊಳ್ಳಲು ಸಕಾಲವೆಂದು ತಿಳಿಸಿದರು. ಈ ವೇಳೆ ಬೆಂವಿವಿ ಉಪಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಪರಿಷತ್‌ಸದಸ್ಯ ಆರ್.ಚೌಡರೆಡ್ಡಿ ಮತ್ತಿತರರಿದ್ದರು.







