ಮೈಸೂರು: ಮಹಾರಾಣಿ ಕಾಲೇಜ್ ಗೆ ದಿಢೀರ್ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ

ಮೈಸೂರು,ಜು.18: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಮಹಾರಾಣಿ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಂದ ತಿಳಿದುಕೊಂಡ ಬಳಿಕ ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.
ಮಹಾರಾಣಿ ಕಾಲೇಜಿಗೆ ಬುಧವಾರ ಭೇಟಿ ನೀಡಿದ ಸಚಿವರು ವಿದ್ಯಾರ್ಥಿಗಳ ಜೊತೆ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿದರು. ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆಗಾಗಿ ಆಗಮಿಸಿದ್ದರು. ಈಗಾಗಲೇ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದು, ಈ ವಿಷಯವಾಗಿ ಪ್ರತಿಭಟನೆ ನಡೆಸಿದ್ದರು. ಮೂಲಭೂತ ಸೌಕರ್ಯ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು. ನಿರ್ವಹಣೆ ವಿಷಯವಾಗಿ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಯಾವ ಕೊರತೆಗಳು ಕಾಲೇಜಿನಲ್ಲಿವೆ ಎನ್ನುವುದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೀರಾ ಎಂದು ಪ್ರಾಂಶುಪಾಲರು ಹಾಗೂ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಿಮಗೆ ಗೊತ್ತಿಲ್ಲ ಎಂದರೆ ಇಲ್ಲೇಕೆ ನೀವು ಇರಬೇಕು ನಿಮ್ಮನ್ನು ಬಳ್ಳಾರಿಗೆ ಕಳುಹಿಸುತ್ತೇನೆ ಎಂದು ಗದರಿದರು. ಇನ್ನು ಮುಂದೆ ಕಾಲೇಜು ನಿರ್ವಹಣೆ ಆಗಬೇಕು ಎಂದು ಜಂಟಿ ನಿರ್ದೇಶಕ ಉದಯಶಂಕರ್ ಅವರಿಗೆ ಸೂಚನೆ ನೀಡಿದರು.
ಹೊಸ ಕೊಠಡಿ ನಿರ್ಮಾಣಕ್ಕೆ ಮತ್ತೆ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿಗಳ ಜೊತೆ ಬರುತ್ತೇನೆ. ಲ್ಯಾಬ್ ನಿರ್ಮಾಣಕ್ಕೆ ಮೂರರಿಂದ ನಾಲ್ಕು ಲಕ್ಷ ಬೇಕು. ಇದಕ್ಕೆ ಅನುದಾನ ಬಿಡುಗಡೆ ವ್ಯವಸ್ಥೆ ಮಾಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಇಂಟರ್ ನ್ಯಾಷನಲ್ ಲೈಬ್ರರಿ ಮಾಡುತ್ತೇವೆ ಸ್ವಲ್ಪ ಕಾಲಾವಕಾಶ ಕೊಡಿ ಎಂದರಲ್ಲದೇ, ಮಹಾರಾಣಿ ಕಾಲೇಜಿನಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮುಡಾ ವತಿಯಿಂದ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಿಕೊಡುತ್ತೇವೆ. 35 ಲ್ಯಾಬ್,16 ಕೊಠಡಿ ವ್ಯವಸ್ಥೆ ಮಾಡುತ್ತೇವೆ ಎಂದರು. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳ ಜೊತೆ 15 ದಿನಕ್ಕೊಮ್ಮೆ ಮೀಟಿಂಗ್ ಮಾಡುವಂತೆ ಪ್ರಾಂಶುಪಾಲರು ಹಾಗೂ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಇರುವ ಶೌಚಾಲಯಗಳನ್ನು ನಿರ್ವಹಣೆ ಮಾಡಲು ಇ ಟಾಯ್ಲೆಟ್ ಅಳವಡಿಸುವಂತೆ ಪಾಲಿಕೆ ಆಯುಕ್ತರಿಗೆ ಆದೇಶಿಸಿದರು.







