ಕೊಡುಗು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ಒದಗಿಸಿ: ಹೈಕೋರ್ಟ್ ಸೂಚನೆ

ಬೆಂಗಳೂರು, ಜು.18: ಕೊಡಗು ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಪ್ರದೇಶದಲ್ಲಿ ಉದ್ದೇಶಿಸಿತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಬುಧವಾರ ಸೂಚಿಸಿದೆ.
ಯೋಜನೆಯನ್ನು ಪ್ರಶ್ನಿಸಿ ಕಾವೇರಿ ಸೇನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜು.25ಕ್ಕೆ ಮುಂದೂಡಿತು.
ಅರ್ಜಿದಾರರ ವಕೀಲ ಬಿ.ಆರ್.ದೀಪಕ್ ವಾದ ಮಂಡಿಸಿ, ಕಾವೇರಿ ನಿಸರ್ಗ ಧಾಮ ಮತ್ತು ಆನೆ ಕಾರಿಡಾರ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರವು ಉದ್ದೇಶಿಸಿವೆ. ಈ ಯೋಜನೆಯು ಈ ಪ್ರದೇಶದ ವನ್ಯಜೀವಿಗಳ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು 2ರಿಂದ 3 ಲಕ್ಷ ಮರಗಳ ನಾಶವಾಗಲಿದೆ. ಆನೆ ಕಾರಿಡಾರ್ ಸಹ ಇದೇ ಮಾರ್ಗದಲ್ಲಿ ಹಾದು ಹೋಗಲಿರುವ ಕಾರಣ ಯೋಜನೆ ಜಾರಿ ಮಾಡದಂತೆ ಮನವಿ ಸಲ್ಲಿಸಲಾಗಿತ್ತು. ಆ ಮನವಿಯನ್ನು ಸರಕಾರಗಳು ಪರಿಗಣಿಸಿಲ್ಲ ಎಂದರು.
ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಇದೇ ಅರ್ಜಿದಾರರು ರೈಲು ಮಾರ್ಗ ಬೇಡ ಎಂದು ಮತ್ತೊಂದು ಅರ್ಜಿ ಸಲ್ಲಿಸಿದ್ದಾರಲ್ಲವೇ? ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ವಕೀಲರು ಹೌದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರೈಲು ಮಾರ್ಗ ಬೇಡ ಎನ್ನುತ್ತೀರಿ, ಈಗ ರಸ್ತೆ ಬೇಡ ಎಂದು ಹೇಳುತ್ತೀದ್ದೀರಿ. ಹಾಗಿದ್ದರೆ ವಿಮಾನಕ್ಕೆ ಮಾತ್ರ ಅವಕಾಶ ಕೊಡುತ್ತೀರಾ? ಈ ಪ್ರದೇಶ ಅಭಿವೃದ್ಧಿಯಾಗುವುದು ಬೇಡವೇ? ಎಂದು ಲಘುಧಾಟಿಯಲ್ಲಿ ಹೇಳಿದರು.







